ಅತ್ಯಂತ ಸಿಂಪಲ್ ಹಾಗೂ ಟೇಸ್ಟಿ ರೆಸಿಪಿ ಇದು. ಬಾಳೆಹಣ್ಣಿನ ಜೊತೆಗೆ ವಾಲ್ನಟ್, ಬ್ರೆಡ್ ರುಚಿಯನ್ನು ದುಪ್ಪಟ್ಟು ಮಾಡಿದೆ. ಮೊಟ್ಟೆಯನ್ನು ಬಳಸುವ ಅಗತ್ಯವಿಲ್ಲ, ಮೈದಾ ಹಾಕದೆ ಬರೀ ಗೋದಿ ಹಿಟ್ಟಿನಿಂದ್ಲೂ ಬನಾನಾ ಬ್ರೆಡ್ ಮಾಡಬಹುದು. ಮೃದುವಾದ ಸಿಹಿಯಾದ ಬಾಳೆಹಣ್ಣಿನ ಬ್ರೆಡ್ ಹೇಗೆ ಮಾಡೋದು ಅನ್ನೋದನ್ನು ನೋಡೋಣ.
ಬೇಕಾಗುವ ಸಾಮಗ್ರಿ : ಚೆನ್ನಾಗಿ ಮಾಗಿದ 3 ಬಾಳೆಹಣ್ಣು, ಒಂದು ಕಪ್ ಸಕ್ಕರೆ, ಅರ್ಧ ಕಪ್ ಎಣ್ಣೆ ಅಥವಾ ಬೆಣ್ಣೆ, ಮುಕ್ಕಾಲು ಕಪ್ ನಷ್ಟು ಮೈದಾ, ಅಷ್ಟೇ ಪ್ರಮಾಣದಲ್ಲಿ ಗೋಧಿ ಹಿಟ್ಟು, ಒಂದು ಚಮಚ ಬೇಕಿಂಗ್ ಪೌಡರ್, ಒಂದು ಚಮಚ ಬೇಕಿಂಗ್ ಸೋಡಾ, ಕಾಲು ಚಮಚದಷ್ಟು ದಾಲ್ಚಿನಿ ಪೌಡರ್, ಚಿಟಿಕೆ ಉಪ್ಪು, ಕಾಲು ಕಪ್ ವಾಲ್ನಟ್.
ತಯಾರಿಸುವ ವಿಧಾನ : ಮೊದಲು ಬಾಳೆಹಣ್ಣುಗಳನ್ನು ಕತ್ತರಿಸಿಕೊಳ್ಳಿ, ಅದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ (ಮಿಕ್ಸ್). ಬಳಿಕ ವೆನಿಲ್ಲಾ ಎಕ್ಸ್ ಟ್ರಾಕ್ಟ್ ಹಾಗೂ ಎಣ್ಣೆ ಹಾಕಿ ಮಿಶ್ರ ಮಾಡಿ. ಮೈದಾ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ದಾಲ್ಚಿನಿ ಪೌಡರ್ ಮತ್ತು ಉಪ್ಪನ್ನು ಸೋಸಿ ಬೆರೆಸಿ.
ಎಲ್ಲವನ್ನೂ ಚೆನ್ನಾಗಿ ಬ್ಲೆಂಡ್ ಮಾಡಿ. ಬಳಿಕ ಮಿಶ್ರಣಕ್ಕೆ ವಾಲ್ನಟ್ ಹಾಕಿ ನಿಧಾನವಾಗಿ ಮಿಶ್ರಣ ತಯಾರಿಸಿ. ಮಿಶ್ರಣವನ್ನು ಕೇಕ್ ಮೌಲ್ಡ್ ಗೆ ಹಾಕಿ ಎರಡು ಬಾರಿ ಅದನ್ನು ಟ್ಯಾಪ್ ಮಾಡಿ. ಪ್ರಿಹೀಟ್ ಮಾಡಿಟ್ಟಿರುವ ಓವನ್ ನಲ್ಲಿ ಇಟ್ಟು 180 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಅದನ್ನು 40 ನಿಮಿಷಗಳ ಕಾಲ ಬೇಕ್ ಮಾಡಿ. ಬ್ರೆಡ್ ಸಂಪೂರ್ಣ ತಣ್ಣಗಾದ ಮೇಲೆ ಅದನ್ನು ಸ್ಲೈಸ್ ಮಾಡಿ ಸರ್ವ್ ಮಾಡಿ.