ಮಾಂಸಹಾರ ಪ್ರಿಯರಿಗೆ ಇಲ್ಲಿ ರುಚಿಕರವಾದ ಬಿರಿಯಾನಿ ಮಾಡುವ ವಿಧಾನ ಇದೆ. ಸುಲಭವಾಗಿ ಕೂಡ ಇದನ್ನು ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಚಿಕನ್ – 1/2 ಕೆಜಿ, ಬಿರಿಯಾನಿ ಪುಡಿ – 2 ಟೇಬಲ್ ಸ್ಪೂನ್, ಲಿಂಬೆಹಣ್ಣಿನ ರಸ – 1 ಟೇಬಲ್ ಸ್ಪೂನ್, ಅರಿಶಿನ – 1/4 ಟೀ ಸ್ಪೂನ್, 1ಕಪ್ – ಮೊಸರು, ಉಪ್ಪು ಸ್ವಲ್ಪ, ಅಕ್ಕಿ 2 ಕಪ್, ತುಪ್ಪ – 2 ಟೇಬಲ್ ಸ್ಪೂನ್, ಎಣ್ಣೆ – 4 ಟೇಬಲ್ ಸ್ಪೂನ್, ಈರುಳ್ಳಿ ಪೇಸ್ಟ್ – 1/4 ಕಪ್, 2 ಈರುಳ್ಳಿ – ಉದ್ದಕ್ಕೆ ಸೀಳಿಕೊಂಡಿದ್ದು, ರುಚಿಗೆ ತಕ್ಕಷ್ಟು – ಉಪ್ಪು, ಪುದೀನಾ, ಕೊತ್ತಂಬರಿ, ಹಸಿಮೆಣಸು ಇವು ಮೂರನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ತಯಾರಿಸಿಕೊಂಡಿದ್ದು – 1/2 ಕಪ್, ಟೊಮೆಟೊ – ಎರಡು, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 3 ಟೇಬಲ್ ಸ್ಪೂನ್ , ಪಲಾವ್ ಎಲೆ – 1, ಚಕ್ಕೆ – 1 ತುಂಡು, ಲವಂಗ – 2, ಏಲಕ್ಕಿ – 4.
ಮಾಡುವ ವಿಧಾನ:
ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಒಂದು ಬೌಲ್ ಗೆ ಹಾಕಿಕೊಂಡು ಅದಕ್ಕೆ ಬಿರಿಯಾನಿ ಮಸಾಲ, ಅರಿಶಿನ, ಉಪ್ಪು, ಮೊಸರು, ಲಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 1 ಗಂಟೆ ಹೊತ್ತು ಮ್ಯಾರಿನೆಟ್ ಮಾಡಿ. ನಂತರ ಗ್ಯಾಸ್ ಮೇಲೆ ಒಂದು ಅಗಲವಾದ ಪಾತ್ರೆ ಇಟ್ಟು ಅದಕ್ಕೆ ತುಪ್ಪ ಎಣ್ಣೆ ಹಾಕಿ. ನಂತರ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿಕೊಳ್ಳಿ. ಇದಾದ ನಂತರ ಈರುಳ್ಳಿ, ಹಸಿಮೆಣಸು ಹಾಕಿ ಸ್ವಲ್ಪ ಫ್ರೈ ಮಾಡಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರಗೆ ಹುರಿಯಿರಿ. ಈರುಳ್ಳಿ ಪೇಸ್ಟ್ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ.
ಆಮೇಲೆ ಪುದೀನಾ,ಕೊತ್ತಂಬರಿ, ಹಸಿಮೆಣಸು ಸೇರಿಸಿ ಮಾಡಿದ ಪೇಸ್ಟ್ ಸೇರಿಸಿ ಫ್ರೈ ಮಾಡಿ ಮ್ಯಾರಿನೆಟ್ ಮಾಡಿಟ್ಟುಕೊಂಡ ಚಿಕನ್ ಹಾಕಿ ಮಿಕ್ಸ್ ಮಾಡಿ ಟೊಮೆಟೊ ಸೇರಿಸಿ, ಉಪ್ಪು ಹಾಕಿ ಕೈಯಾಡಿಸಿ. ನಂತರ ಒಂದು ಮುಚ್ಚಳ ಮುಚ್ಚಿ ಚಿಕನ್ ಅನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಚಿಕನ್ ಬೆಂದ ನಂತರ 4 ಕಪ್ ನೀರು ಹಾಕಿ . ನೀರು ಕುದಿಯಲು ಬಿಡಿ. ನಂತರ ಅಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಜೋರು ಉರಿಯಲ್ಲಿ ಕುದಿಯಲು ಬಿಡಿ. 5 ನಿಮಿಷಗಳ ನಂತರ ತೆಗೆದು ಮತ್ತೊಮ್ಮೆ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ 15 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಇಟ್ಟು ಗ್ಯಾಸ್ ಆಫ್ ಮಾಡಿ.