ಬೆಂಡೆಕಾಯಿಯ ಅಡುಗೆಗಳೆಲ್ಲವೂ ರುಚಿಯಾಗಿರುತ್ತವೆ. ಗುಜರಾತಿ ಶೈಲಿಯ ಬೆಂಡೆಕಾಯಿಯ ಪಲ್ಯ ವಿಶಿಷ್ಟವಾಗಿದ್ದು, ಬಹಳ ರುಚಿಕರವೂ ಆಗಿರುತ್ತದೆ.
ಹಾಗಾದರೆ, ಗುಜರಾತಿಗರ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು :
ಕಾಲು ಕೆ.ಜಿ. ಬೆಂಡೆಕಾಯಿ, ಒಂದು ಲೋಟ ಮಜ್ಜಿಗೆ, ಒಂದು ಚಮಚ ಕಡಲೇಹಿಟ್ಟು, ಒಂದು ಚಮಚ ಅರಿಶಿನ ಪುಡಿ, ಒಂದು ಚಮಚ ಮೆಣಸಿನ ಪುಡಿ, ಒಂದು ಚಮಚ ಜೀರಿಗೆ ಪುಡಿ, ನಾಲ್ಕು ಚಮಚ ಎಣ್ಣೆ, ಎರಡರಿಂದ ನಾಲ್ಕು ಬೆಳ್ಳುಳ್ಳಿ ಎಸಳು, ಎರಡರಿಂದ ನಾಲ್ಕು ಹಸಿಮೆಣಸು, ಒಂದು ಈರುಳ್ಳಿ, ಸ್ವಲ್ಪ ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು.
ಮಾಡುವ ವಿಧಾನ :
ಚೆನ್ನಾಗಿ ತೊಳೆದುಕೊಂಡ ಬೆಂಡೆಕಾಯಿಗಳನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ಸಿದ್ಧಮಾಡಿಕೊಳ್ಳಿ. ಮಾಡಿಟ್ಟುಕೊಂಡ ಪೇಸ್ಟ್ ಗೆ ಮೆಣಸಿನ ಪುಡಿ, ಜೀರಿಗೆ ಪುಡಿ ಹಾಗೂ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಈ ಮಿಶ್ರಣವನ್ನು ಪ್ರತಿ ಬೆಂಡೆ ಹೋಳಿನಲ್ಲಿ ತುಂಬಿ. ಮಜ್ಜಿಗೆಯಲ್ಲಿ ಕಡಲೆ ಹಿಟ್ಟು ಸೇರಿಸಿ, ಬೆರೆಸಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು, ಬೆಂಡೆಕಾಯಿ ಹೋಳುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹುರಿದು, ಮಜ್ಜಿಗೆಗೆ ಹಾಕಿ. ನಂತರ ಆ ಮಿಶ್ರಣಕ್ಕೆ ಸ್ವಲ್ಪ ಉಪ್ಪು ಹಾಗೂ ಅರಿಶಿನ ಪುಡಿಯನ್ನು ಹಾಕಿ ಹತ್ತು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿದರೆ, ಗುಜರಾತಿ ಶೈಲಿ ಬೆಂಡೆಕಾಯಿ ಪಲ್ಯ ಸವಿಯಲು ರೆಡಿ.