ಅರಬ್ ರಾಷ್ಟ್ರದಲ್ಲಿದ್ದ 38 ವರ್ಷದ ಭಾರತೀಯ ಮುಂಚೂಣಿ ಸಿಬ್ಬಂದಿ ಕೊನೆಗೂ ಕೋವಿಡ್ 19 ಮಾರಿಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಇವರಿಗೆ ಶ್ವಾಸಕೋಶವು ಗಂಭೀರವಾಗಿ ಹಾನಿಗೊಳಗಾಗಿತ್ತು. ಇದರಿಂದಾಗಿ ಬರೋಬ್ಬರಿ ಆರು ತಿಂಗಳುಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದೇ ಇವರು ಕೊನೆಗೂ ಕೋವಿಡ್ ವಿರುದ್ಧ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಟಿ ಟೆಕ್ನಿಷಿಯನ್ ಆಗಿದ್ದ ಅರುಣ್ ಕುಮಾರ್ ಎಂ. ನಾಯರ್ ಕೋವಿಡ್ ಸೋಂಕಿನ ವಿರುದ್ಧ ಬರೋಬ್ಬರಿ ಅರ್ಧ ವರ್ಷಗಳ ಕಾಲ ಸೆಣೆಸಾಟ ನಡೆಸಿ ಯಶಸ್ವಿಯಾಗಿದ್ದಾರೆ. ಕೃತಕ ಶ್ವಾಸಕೋಶದ ಸಹಾಯದಿಂದ ಉಸಿರಾಡುತ್ತಿದ್ದ ಅರುಣ್ ಕುಮಾರ್ ಶ್ವಾಸಕೋಶವು ಇದೀಗ ಚೇತರಿಕೆ ಕಂಡಿದೆ.
ಈ ಅವಧಿಯಲ್ಲಿ ಅರುಣ್ ಕುಮಾರ್ ನಾಯರ್ ಹೃದಯ ಸ್ತಂಭನ ಸೇರಿದಂತೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅರುಣ್ ಕುಮಾರ್ ಟ್ರಾಕಿಯೋಸ್ಟೊಮಿ ಹಾಗೂ ಬ್ರಾಂಕೋಸ್ಕೋಪಿಯಂತಹ ಹಲವಾರು ಚಿಕಿತ್ಸೆಗಳಿಗೆ ಒಳಗಾಗಿದ್ದರು.
ದೇಶದ ಆರೋಗ್ಯವನ್ನು ರಕ್ಷಿಸಲು ಹೋಗಿ ತಾನೇ ಹಾಸಿಗೆ ಹಿಡಿದ ಅವರ ಸೇವಾ ಮನೋಭಾವವನ್ನು ಗುರುತಿಸಿ ಬಹುರಾಷ್ಟ್ರೀಯ ಆರೋಗ್ಯ ಸೇವಾ ಗುಂಪಾದ ವಿಪಿಎಸ್ ಹೆಲ್ತ್ ಕೇರ್ ಅರುಣ್ ಕುಮಾರ್ರಿಗೆ 50 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಮಾಡಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಅರುಣ್ ಕುಮಾರ್ ನಾಯರ್, ನನಗೆ ಯಾವುದೂ ನೆನಪಿಲ್ಲ. ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ ಎಂದಷ್ಟೇ ಹೇಳಬಲ್ಲೆ ಎಂದು ಹೇಳಿದ್ದಾರೆ.
ನಾಯರ್ ಕೇರಳ ಮೂಲದವರಾಗಿದ್ದಾರೆ. ಕೆಲ ಸಮಯದ ಹಿಂದಷ್ಟೇ ಇವರನ್ನು ಆಸ್ಪತ್ರೆಯ ಜನರಲ್ ರೂಮ್ನಲ್ಲಿ ಇರಿಸಲಾಗಿತ್ತು. ಅದಕ್ಕೂ ಮೊದಲು ಐದು ತಿಂಗಳುಗಳ ಕಾಲ ನಾಯರ್ ಐಸಿಯುವಿನಲ್ಲಿ ಲೈಫ್ ಸಪೋರ್ಟಿಂಗ್ ಸಿಸ್ಟಂನಲ್ಲಿಯೇ ಇದ್ದರು.