ಬೆಂಗಳೂರು: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿದ್ದ 5 ಕೆಜಿ ಉಚಿತ ಅಕ್ಕಿ ಈ ತಿಂಗಳೇ ಕೊನೆಯಾಗಲಿದೆ.
ಗರೀಬ್ ಕಲ್ಯಾಣ್ ಯೋಜನೆ ಸೆಪ್ಟೆಂಬರ್ 30 ಕ್ಕೆ ಅಂತ್ಯವಾಗುತ್ತಿದ್ದು, 5 ಕೆಜಿ ಉಚಿತ ಅಕ್ಕಿ ವಿತರಣೆ ನಿಲ್ಲಿಸಲಾಗುವುದು. ಅಕ್ಟೋಬರ್ ನಿಂದ ಪಡಿತರ ಚೀಟಿದಾರರಿಗೆ ರಾಜ್ಯದ ಪಾಲಿನ ತಲಾ 5 ಕೆಜಿ ಅಕ್ಕಿ ಮಾತ್ರ ನೀಡಲಾಗುವುದು ಎಂದು ಹೇಳಲಾಗಿದೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್ ಗೆ 5 ಕೆಜಿ ಧಾನ್ಯ ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದ ಪಾಲು ಸೇರಿ ತಲಾ 10 ಕೆಜಿ ಧಾನ್ಯ ಸಿಗುತ್ತಿತ್ತು.
8 ಕೆಜಿ ಅಕ್ಕಿ, ಎರಡು ಕೆಜಿ ರಾಗಿ ಅಥವಾ ಗೋಧಿ ಪಡೆಯುತ್ತಿದ್ದ ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ತಲಾ ಐದು ಕೆಜಿ ಅಕ್ಕಿ ಕಡಿತವಾಗಲಿದೆ. ಯೋಜನೆ ಮುಂದುವರಿಸಲು ಒತ್ತಾಯ ಕೇಳಿ ಬಂದಿದ್ದು, ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.