ಕೋವಿಶೀಲ್ಡ್ ಲಸಿಕೆಯ ತಯಾರಕ ಕಂಪನಿಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾದ ಸೈರಸ್ ಪೂನವಾಲ ವಿಶ್ವದಲ್ಲಿ ಮೂರರಲ್ಲಿ ಎರಡು ಶಿಶು ನಮ್ಮ ಕಂಪನಿಯ ಒಂದು ಅಥವಾ ಅದಕ್ಕೂ ಹೆಚ್ಚಿನ ಲಸಿಕೆಗಳಿಂದ ಸಂರಕ್ಷಿಸಲ್ಪಟ್ಟಿದೆ ಎಂದು ಹೇಳಿದ್ದಾರೆ.
ನಿನ್ನೆ ನಡೆದ ಪುಣೆ ಇಂಟರ್ನ್ಯಾಷನಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಪದ್ಮಭೂಷಣ ಪುರಸ್ಕೃತ ಸೈರಸ್ ಪೂನವಾಲ, ನಮ್ಮ ಕಂಪನಿಯ ಡೋಸ್ಗಳು ಒಂದು ಕಪ್ ಚಹಾದ ಬೆಲೆಗೆ ಮಾರಾಟವಾಗುತ್ತಿರೋದ್ರಿಂದ ವಿಶ್ವದ ಬಹುತೇಕ ಬಡ ರಾಷ್ಟ್ರಗಳು ನಮ್ಮ ಕಂಪನಿಯ ಲಸಿಕೆಗಳನ್ನೇ ಬಳಸುತ್ತಿವೆ ಎಂದು ಹೇಳಿದರು.
ನಮ್ಮ ಕಂಪನಿಯ ಹೆಚ್ಚಿನ ಲಸಿಕೆಗಳನ್ನು ಬಡರಾಷ್ಟ್ರಗಳು ಬಳಕೆ ಮಾಡುತ್ತಿವೆ. ಯುನಿಸೆಫ್ ಹಾಗೂ ಇತರೆ ಲೋಕೋಪಕಾರಿ ಸಂಸ್ಥೆಗಳು ನಮ್ಮ ಕಂಪನಿಯ ಲಸಿಕೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ನಮ್ಮ ಸಿಬ್ಬಂದಿ ಹಾಗೂ ವಿಜ್ಞಾನಿಗಳ ಸಹಾಯದಿಂದ ನಿರ್ಮಾಣವಾದ ಲಸಿಕೆಗಳನ್ನು ಒಂದು ಕಪ್ ಚಹಾದ ಬೆಲೆಗೆ ಕೈಗೆಟುಕುವಂತೆ ಮಾಡಿದ್ದರಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಔಷಧಿ ವಿಚಾರದಲ್ಲಿ ಸ್ವಾವಲಂಬಿಯಾಗಿ ಇರಬಹುದಾಗಿದೆ ಎಂದು ಹೇಳಿದರು.