ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಅಂತ ಸಂಸ್ಕೃತಿ ದೇಶದ ಮಟ್ಟದಲ್ಲಿ ಪ್ರತಿನಿಧಿಸುತ್ತದೆ ಅಂದರೆ ಇನ್ನೆಷ್ಟು ಹೆಮ್ಮೆಯಾಗಬೇಡ. ಅಂತಹ ಸಾಲಿನಲ್ಲಿ ನಮ್ಮ ಕಸೂತಿ ಕಲೆ ಕೂಡ ಒಂದು. ಇಂದು ನಡೆದ ಕೇಂದ್ರ ಬಜೆಟ್ ನ ವೇಳೆ ನಿರ್ಮಲಾ ಸೀತಾರಾಮನ್ ಅವರ ಸೀರೆಯೊಂದು ಚರ್ಚೆಗೆ ಕಾರಣವಾಗಿದೆ. ಅಷ್ಟೆ ಅಲ್ಲ ಕನ್ನಡಿಗರೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ತಾ ಇದ್ದಾರೆ.
ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 5ನೇ ಬಜೆಟ್ ಮಂಡನೆ ಮಾಡಿದ್ದಾರೆ. ಈ ವೇಳೆ ಅವರುಟ್ಟಿದ್ದ ಸೀರೆ ಧಾರವಾಡ ಜಿಲ್ಲೆಯ ನವಲಗುಂದ ಕಸೂತಿ ಕಲೆ ಇರುವ ಕೆಂಪು ಬಣ್ಣದ ಸೀರೆ. ಧಾರವಾಡ ನಗರದ ನಾರಾಯಣಪುರದಲ್ಲಿ ಇರುವ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಪ್ಟ್ಸ್ ಇದನ್ನು ತಯಾರು ಮಾಡಿದ್ದಾರೆ. ಈ ಸೀರೆಯುಟ್ಟು ಅವರು ಬಜೆಟ್ ಮಂಡನೆ ಮಾಡಿರೋದು ವಿಶೇಷ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರ್ಮಲಾ ಸೀತಾರಾಮನ್ ಅವರಿಗೆ ಕಾರ್ಯಕ್ರಮವೊಂದರಲ್ಲಿ ಈ ನವಲಗುಂದ ಕಸೂತಿ ಕಲೆ ಬಗ್ಗೆ ಹೇಳಿದ್ದರಂತೆ. ಜೊತೆಗೆ ಒಂದಿಷ್ಟು ಸೀರೆಗಳನ್ನು ಉಡುಗೊರೆಯಾಗಿ ನೀಡಿದ್ದರಂತೆ. ಸಾಮಾನ್ಯವಾಗಿ ಯಾವಾಗದರೊಮ್ಮೆ ಈ ಸೀರೆ ಉಟ್ಟಿದ್ದರೆ ಅಷ್ಟು ವಿಶೇಷ ಆಗ್ತಾ ಇರಲಿಲ್ಲ. ಬಜೆಟ್ ಸಮಯದಲ್ಲಿ ಈ ಸೀರೆ ಎಲ್ಲರ ಗಮನ ಸೆಳೆದಿದೆ.