
ರಸಂ ಬೇಗನೆ ಆಗುವಂತಹ ಒಂದು ಅಡುಗೆ. ಮನೆಯಲ್ಲಿ ಏನೇ ತರಕಾರಿ ಇಲ್ಲದಿದ್ದರೂ ಟೊಮೆಟೊ ಒಂದು ಇದ್ದರೆ ಸಾಕು ರುಚಿಕರವಾದ ರಸಂ ಮಾಡಿಕೊಂಡು ಊಟ ಮಾಡಬಹುದು.
ಒಂದು ಬಾಣಲೆಗೆ 4 ಟೊಮೆಟೊ, 2 ಈರುಳ್ಳಿ, 2 ಹಸಿಮೆಣಸು ಕತ್ತರಿಸಿ ಹಾಕಿ. ಹಾಗೇ 1 ಟೀ ಸ್ಪೂನ್ ಕಾಳುಮೆಣಸು, 1 ಟೀ ಸ್ಪೂನ್ ಜೀರಿಗೆ, ನೆಲ್ಲಿಕಾಯಿ ಗಾತ್ರದಷ್ಟು ಹುಣಸೆಹಣ್ಣು, ಒಂದು ಸಣ್ಣ ತುಂಡು ಬೆಲ್ಲ, 5 ಎಸಳು ಬೆಳ್ಳುಳ್ಳಿ, ಸ್ವಲ್ಪ ಕೊತ್ತಂಬರಿಸೊಪ್ಪು, 1 ಟೀ ಸ್ಪೂನ್ ಖಾರದ ಪುಡಿ, ½ ಟೀ ಸ್ಪೂನ್ ಅರಿಶಿನ ಪುಡಿ 5 ಗ್ಲಾಸ್ ನೀರು ಹಾಕಿ ಗ್ಯಾಸ್ ಮೇಲೆ 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ನಂತರ ಇದರ ನೀರನ್ನು ಸೋಸಿಕೊಂಡು ಟೊಮೆಟೊ ಹಾಗೂ ಉಳಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ತಣ್ಣಗಾದ ಮೇಲೆ ಇವುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ತೀರಾ ನುಣ್ಣಗೆ ರುಬ್ಬುವುದು ಬೇಡ. ನಂತರ ರುಬ್ಬಿದ ಮಿಶ್ರಣವನ್ನು ಟೊಮೆಟೊ ಬೇಯಿಸಿಕೊಂಡ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುದಿಯಲು ಬಿಡಿ. ಇದು ಕುದಿಯುಲು ಆರಂಭಿಸಿದಾಗ ಒಂದು ಒಗ್ಗರಣೆ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಚೂರು ಇಂಗು, ಸಾಸಿವೆ, 1 ಒಣಮೆಣಸು, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿಕೊಂಡು ಅದನ್ನು ರಸಂ ಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಅಗತ್ಯವಿರುವಷ್ಟು ನೀರು ಸೇರಿಸಿಕೊಂಡು ಚೆನ್ನಾಗಿ ಕುದಿಸಿದರೆ ರಸಂ ಸವಿಯಲು ಸಿದ್ಧ.