ಪ್ರಿಯತಮನ ಜತೆ ಓಡಿಹೋಗಲು ಮನೆ ಬಿಟ್ಟು ಬಂದು ಸಂಕಷ್ಟಕ್ಕೆ ಸಿಲುಕಿದ್ದ ಬಾಲಕಿಯನ್ನು ರಾಜಸ್ಥಾನದಲ್ಲಿ ಪೊಲೀಸರು ರಕ್ಷಿಸಿದ್ದಾರೆ. ಛತ್ತೀಸ್‌ಗಢದಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯು ಯುವಕನೊಬ್ಬನನ್ನು ಪ್ರೀತಿಸಿದ್ದು, ಇಬ್ಬರೂ ಮನೆ ಬಿಟ್ಟು ಓಡಿಹೋಗಲು ತೀರ್ಮಾನಿಸಿದ್ದಾರೆ.
ಯುವಕನು ಬರುವಾಗ ಮನೆಯಿಂದ ಹಣ ಹಾಗೂ ಆಭರಣ ತೆಗೆದುಕೊಂಡು ಬರಲು ತಿಳಿಸಿದ್ದಾನೆ. ಆದರೆ, ತರುಣಿಗೆ ಹಣ, ಆಭರಣ ತೆಗೆದುಕೊಂಡು ಹೋಗಲು ಆಗಿಲ್ಲ. ಆಗ ಕುಪಿತಗೊಂಡ ಯುವಕ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ ಕಾರಣ ಮನೆ ಬಿಟ್ಟು ಬಂದ ವಿದ್ಯಾರ್ಥಿನಿಯು ಸಂಕಷ್ಟಕ್ಕೆ ಸಿಲುಕಿದ್ದಾಳೆ.
ರಾಜಸ್ಥಾನದ ಧೋಲ್‌ಪುರ ರೈಲು ನಿಲ್ದಾಣದಲ್ಲಿ ಆಕೆ ಪದೇಪದೇ ಪ್ರಿಯತಮನಿಗೆ ಕರೆ ಮಾಡಿದ್ದಾಳೆ. ಆದರೆ, ಈಕೆ ಹಣ ಹಾಗೂ ಆಭರಣ ತರದ ಕಾರಣ ಆತ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಈ ಕಡೆ ಮನೆಗೂ ಹೋಗಲು ಆಗದ, ಆ ಕಡೆ ಪ್ರಿಯತಮನೂ ಸಿಗದ ಕಾರಣ ವಿದ್ಯಾರ್ಥಿನಿಯು ಅಳುತ್ತ ರೈಲು ನಿಲ್ದಾಣದಲ್ಲಿಯೇ ಕುಳಿತಿದ್ದಾಳೆ. ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿಯು ಮಕ್ಕಳ ಸಹಾಯವಾಣಿ ತಂಡಕ್ಕೆ ಮಾಹಿತಿ ನೀಡಿದ್ದು, ಬಳಿಕ ಸಹಾಯವಾಣಿ ತಂಡವು ಆಕೆಯನ್ನು ರಕ್ಷಿಸಿದ್ದಾರೆ.
ಸದ್ಯ ಸಹಾಯವಾಣಿ ತಂಡವು ಬಾಲಕಿಯನ್ನು ಕೌನ್ಸೆಲಿಂಗ್ ಮಾಡುತ್ತಿದ್ದು, ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಇರಿಸಿದ್ದಾರೆ. ಕೌನ್ಸೆಲಿಂಗ್ ಬಳಿಕ ಕಾನೂನು ಪ್ರಕ್ರಿಯೆ ಅನ್ವಯ ತರುಣಿಯನ್ನು ಆಕೆಯ ಪೋಷಕರಿಗೆ ಒಪ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ತರುಣಿಯ ಪೋಷಕರು ಮಗಳು ಅಪಹರಣವಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಪೋಷಕರಿಗೆ ಕರೆ ಮಾಡಿದ್ದು, ಧೋಲ್‌ಪುರಕ್ಕೆ ಆಗಮಿಸುವಂತೆ ತಿಳಿಸಿದ್ದಾರೆ. ಒಟ್ಟಿನಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿಆಕರ್ಷಣೆಗೆ ಮರುಳಾಗಬಾರದು ಎಂದು ತರುಣಿಯ ಪ್ರಕರಣದಿಂದ ಸಾಬೀತಾಗಿದೆ.