ಕಲಬುರಗಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಧಟತನಕ್ಕೆ ನಾನು ಮಾತನಾಡಿಲ್ಲ. ಮೈಸೂರು ಮಹಾನಗರ ಪಾಲಿಕೆ ಮೈತ್ರಿ ಬಗ್ಗೆ ಮೌನ ಮುರಿದಿರಲಿಲ್ಲ. ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಪದೇ ಪದೇ ಜೆಡಿಎಸ್ ಒಂದು ಪಕ್ಷವೇ ಅಲ್ಲ, ಇಂದು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದರು. ಅವರ ಉದ್ಧಟತನದ ಹೇಳಿಕೆಗೆ ನಾವು ರಾಜ್ಯದ ಜನತೆಯ ಮುಂದೆ ಉತ್ತರ ನೀಡಬೇಕಾಗಿತ್ತು. ಅಲ್ಲದೇ ಬಿಜೆಪಿ ಜೊತೆ ಮೈತ್ರಿಗೆ ಮುಂದಾದರೆ ಜನರು ಬೆಂಬಲ ನೀಡಲ್ಲ ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ನಾವು ಬಿಜೆಪಿ ಜೊತೆಯೂ ಕೈ ಜೋಡಿಸಿಲ್ಲ. ಸ್ವತಂತ್ರವಾಗಿ ಜೆಡಿಎಸ್ ಶಕ್ತಿ ಏನೆಂಬುದನ್ನು ತೋರಿಸಿದ್ದೇವೆ ಎಂದರು.
ಗಮನಿಸಿ..! ಶುಕ್ರವಾರ ಭಾರತ್ ಬಂದ್ ಗೆ ಭಾರೀ ಬೆಂಬಲ, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಚಕ್ಕಾ ಜಾಮ್
ಇದೇ ವೇಳೆ ರಾಜ್ಯ ಬಿಜೆಪಿ ಸರ್ಕಾರ ಕೆಲವರ ತಂತ್ರಗಾರಿಕೆಯಿಂದ ರಚನೆಯಾಗಿದೆ ಎಂದು ಕಿಡಿಕಾರಿದ ಕುಮಾರಸ್ವಾಮಿ, ಈ ಸರ್ಕಾರಕ್ಕೆ ಜನರ ಸಮಸ್ಯೆಗೆ ಸ್ಪಂದಿಸುವ ಕಾಳಜಿ ಇಲ್ಲ. ಸಚಿವ, ಶಾಸಕರಿಗೂ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂಬ ಮನೋಭಾವನೆಯೂ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಅಧಿಕಾರ ನಡೆಸಬೇಕಿದೆ. ಬಿ.ಎಸ್.ವೈ. ಹೆಸರಿಗೆ ಮಾತ್ರ ಸಿಎಂ ಆಗಿದ್ದಾರೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಅಪಾರ ಪ್ರಮಾಣದ ಹಣ ಲೂಟಿಯಾಗುತ್ತಿದೆ ಎಂದು ಆರೋಪಿಸುವ ಪ್ರಧಾನಿ ಮೋದಿಯವರಿಗೆ ಕರ್ನಾಟಕದಲ್ಲಿರುವ ಇವರದೇ ಪಕ್ಷದ ಸರ್ಕಾರದಲ್ಲಿ ನಡೆಯುತ್ತಿರುವ ಲೂಟಿ, ಭ್ರಷ್ಟಾಚಾರ ಕಾಣುತ್ತಿಲ್ಲವೇ? ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಬೇರೆ ಪಕ್ಷದವರಲ್ಲ, ಬಿಜೆಪಿಯಲ್ಲಿನ ಶಾಸಕರೇ ಹೇಳಿಕೆ ನೀಡುತ್ತಿದ್ದಾರೆ ಆದರೂ ಪ್ರಧಾನಿ ಮೋದಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.