ಈರುಳ್ಳಿ. ಬಹುತೇಕರ ಅಚ್ಚುಮೆಚ್ಚು. ಸಲಾಡ್ ನಿಂದ ಹಿಡಿದು ಬಜ್ಜಿಯವರೆಗೆ ಎಲ್ಲ ಆಹಾರದ ರುಚಿಯನ್ನು ಇದು ಹೆಚ್ಚಿಸುತ್ತದೆ. ಬೇಸಿಗೆ, ಚಳಿಗಾಲ ಯಾವುದೇ ಇರಲಿ ಈರುಳ್ಳಿ ಬಳಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಈರುಳ್ಳಿ ಮುಖ್ಯ ತರಕಾರಿಯಲ್ಲ. ಆದರೆ ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುತ್ತದೆ. ಹಾಗಾಗಿಯೇ ಅಡುಗೆ ಮನೆಯಲ್ಲಿ ಈರುಳ್ಳಿಗೆ ವಿಶೇಷ ಜಾಗವಿದೆ.
ಕತ್ತರಿಸುವಾಗ ಕಣ್ಣಲ್ಲಿ ನೀರು ತರಿಸಿದ್ರೂ ಈರುಳ್ಳಿ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಸದಾ ಬೇಡಿಕೆಯಲ್ಲಿರುವ ಈರುಳ್ಳಿ ಬೆಲೆ ಆಗಾಗ ಗಗನಕ್ಕೇರುವುದುಂಟು. ಈರುಳ್ಳಿ, ರಾಜಕೀಯಕ್ಕೂ ನಂಟಿದೆ. ರಾಜ್ಯವೊಂದರ ಸರ್ಕಾರ, ಈರುಳ್ಳಿ ಬೆಲೆ ಏರಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈರುಳ್ಳಿ ಜೊತೆ ನಾವು ಅನೇಕ ವರ್ಷಗಳ ಸಂಬಂಧ ಹೊಂದಿದ್ದೇವೆ. ಸುಮಾರು ಐದು ಸಾವಿರ ವರ್ಷಗಳಿಂದ ಇದನ್ನು ಬೆಳೆಯಲಾಗ್ತಿದೆ. ಮಧ್ಯ ಏಷ್ಯಾದಲ್ಲಿ ಮೊದಲು ಬೆಳೆಯಲಾಯಿತು ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಇದರ ಮೂಲ ಮಧ್ಯಪ್ರಾಚ್ಯ ಎನ್ನುತ್ತಾರೆ. ಭಾರತ ಮತ್ತು ಚೀನಾದಲ್ಲಿ ಸುಮಾರು 5 ಸಾವಿರ ವರ್ಷಗಳಿಂದ ಈರುಳ್ಳಿ ಬೆಳೆಯುತ್ತಿದ್ದಾರೆ.