alex Certify ಪೋಷಕರು ಮತ್ತು ಸಮಾಜದ ಪ್ರೀತಿಗಿಂತಲೂ ಬಲವಾದ ‘ಪ್ರೀತಿ’ ಕುರುಡು: ಹೈಕೋರ್ಟ್ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರು ಮತ್ತು ಸಮಾಜದ ಪ್ರೀತಿಗಿಂತಲೂ ಬಲವಾದ ‘ಪ್ರೀತಿ’ ಕುರುಡು: ಹೈಕೋರ್ಟ್ ಮಹತ್ವದ ಹೇಳಿಕೆ

ಪ್ರೀತಿ ಕುರುಡು ಇದು ಸಮಾಜ ಹಾಗೂ ಹೆತ್ತವರ ಪ್ರೀತಿಗಿಂತಲೂ ಬಲವಾಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿನಿಯೊಬ್ಬಳ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ ತಮ್ಮ ಪುತ್ರಿ ನಿಸರ್ಗ ಕಾಣೆಯಾಗಿದ್ದಾಳೆ ಎಂದು ಆಕೆಯ ತಂದೆ ಟಿ.ಎಲ್‌. ನಾಗರಾಜು ಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಸಲ್ಲಿಸಿದ್ದರು.

ಕಾಲೇಜು ಹಾಸ್ಟೆಲ್‌ನಿಂದ ನಿಸರ್ಗ ಕಾಣೆಯಾಗಿದ್ದಾಳೆ. ಇದರ ಹಿಂದೆ ಡ್ರೈವರ್‌ ಆಗಿರೋ ನಿಖಿಲ್‌ ಉರುಫ್‌ ಅಭಿ ಎಂಬಾತನ ಕೈವಾಡವಿದೆ ಎಂದು ನಾಗರಾಜು ಆರೋಪಿಸಿದ್ದರು. ಜಸ್ಟಿಸ್‌ ಬಿ. ವೀರಪ್ಪ ಹಾಗೂ ಜಸ್ಟಿಸ್‌ ಕೆ.ಎಸ್‌. ಹೇಮಲೇಖಾ ಅವರ ಪೀಠದೆದುರು ನಿಸರ್ಗ ಹಾಗೂ ನಿಖಿಲ್‌ನನ್ನು ಹಾಜರುಪಡಿಸಲಾಯ್ತು.

ಎಪ್ರಿಲ್‌ 23, 2003ರಲ್ಲಿ ಜನಿಸಿರೋ ನಿಸರ್ಗ ಈಗಾಗ್ಲೇ ಪ್ರಾಪ್ತ ವಯಸ್ಸಿಗೆ ಬಂದಿದ್ದಾಳೆ. ತಾನು ನಿಖಿಲ್‌ನನ್ನು ಪ್ರೀತಿಸುತ್ತಿದ್ದು ಸ್ವಇಚ್ಛೆಯಿಂದ ಅವನೊಟ್ಟಿಗೆ ಹೋಗಿದ್ದೇನೆ, ನಾವಿಬ್ಬರೂ ಮೇ 13ರಂದು ಮದುವೆಯಾಗಿದ್ದೇವೆ. ಸದ್ಯ ಜೊತೆಯಾಗಿ ವಾಸಿಸುತ್ತಿದ್ದೇವೆ ಎಂದು ಹೈಕೋರ್ಟ್‌ಗೆ ತಿಳಿಸಿದ್ದಾಳೆ. ತಾನು ಮರಳಿ ಹೆತ್ತವರ ಬಳಿ ಹೋಗುವುದಿಲ್ಲ, ಪತಿ ನಿಖಿಲ್‌ ಜೊತೆಗೆ ಇರುತ್ತೇನೆ ಅಂತಾ ಸ್ಪಷ್ಟಪಡಿಸಿದ್ದಾಳೆ.

ವಾದ – ವಿವಾದ ಆಲಿಸಿದ ನ್ಯಾಯಾಲಯ, ನಿಸರ್ಗ ಮತ್ತವಳ ಪೋಷಕರಿಗೆ ಕಿವಿಮಾತು ಹೇಳಿದೆ. ‘‘ನಮ್ಮ ಇತಿಹಾಸದಲ್ಲಿ ಮಕ್ಕಳಿಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ತಂದೆ-ತಾಯಿ, ತಂದೆ-ತಾಯಿಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಮಕ್ಕಳಿದ್ದಾರೆ. ಇಬ್ಬರ ನಡುವೆ ಪ್ರೀತಿ, ವಾತ್ಸಲ್ಯವಿದ್ದರೆ ಸಂಸಾರದಲ್ಲಿ ಬಿರುಕು ಮೂಡಲಾರದು. ಒಂದೋ ಮಕ್ಕಳು ಪೋಷಕರ ವಿರುದ್ಧ ಹೋಗುತ್ತಾರೆ ಅಥವಾ ಪೋಷಕರು ಮಕ್ಕಳ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತಾರೆ, ಈ ರೀತಿ ಆಗಬಾರದು” ಎಂದು ಹೈಕೋರ್ಟ್ ಸಲಹೆ ನೀಡಿದೆ.

ಪ್ರಸ್ತುತ ಪ್ರಕರಣದ ವಿಲಕ್ಷಣ ಸಂಗತಿಗಳು ಮತ್ತು ಸಂದರ್ಭಗಳನ್ನು ಗಮನಿಸಿದ್ರೆ ಪ್ರೇಮ ಕುರುಡು ಮತ್ತು ಪೋಷಕರು, ಕುಟುಂಬ ಸದಸ್ಯರು ಹಾಗೂ ಸಮಾಜದ ಪ್ರೀತಿಗಿಂತ ಹೆಚ್ಚು ಶಕ್ತಿಶಾಲಿ ಅಸ್ತ್ರವಾಗಿದೆ ಎಂಬುದು ಸ್ಪಷ್ಟ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ನಿಸರ್ಗಗೆ ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದೆ. “ಜೀವನವು ಪ್ರತಿಕ್ರಿಯೆ, ಪ್ರತಿಧ್ವನಿ ಮತ್ತು ಪ್ರತಿಬಿಂಬವನ್ನು ಒಳಗೊಂಡಿರುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಳ್ಳಲು ಇದು ಸುಸಮಯವಾಗಿದೆ. ಮಕ್ಕಳು ತಮ್ಮ ಹೆತ್ತವರಿಗಾಗಿ ಏನು ಮಾಡುತ್ತಿದ್ದಾರೆ ಎಂದು ಕೋರ್ಟ್‌ ಪ್ರಶ್ನಿಸಿದೆ. ಒಂದಿಲ್ಲೊಂದು ದಿನ ಮಕ್ಕಳು ಹೆತ್ತವರ ಬಳಿ ಹಿಂತಿರುಗುತ್ತಾರೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ನಿಸರ್ಗಳ ತಂದೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ನ್ಯಾಯಾಲಯ, ನಿಸರ್ಗಗೆ ಆಕೆಯ ಪತಿಯೊಂದಿಗೆ ತೆರಳಲು ಅನುಮತಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...