ಬಾಲಿವುಡ್ನಲ್ಲಿ ಇತ್ತೀಚಿಗೆ ತೆರೆ ಕಂಡಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಸಂಪೂರ್ಣ ರಾಷ್ಟ್ರದಲ್ಲಿಯೇ ಒಂದು ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಎಲ್ಲೆಲ್ಲೂ ಹೌಸ್ಫುಲ್ ಪ್ರದರ್ಶನಗಳು, ಕಣ್ಣೀರಿನ ಕತೆಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿದೆ.
ಅದರೆ ಸಮಾಜದ ಒಂದು ವರ್ಗವು ಈ ಸಿನಿಮಾದ ಬಗ್ಗೆ ಸಂತೋಷವಾದಂತೆ ಕಾಣುತ್ತಿಲ್ಲ. ಇದನ್ನು ಪ್ರಚಾರ ಎಂದು ಕರೆದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಈ ಸಿನಿಮಾದ ಮೂಲಕ ದೇಶದ ಜನರ ನಡುವೆ ದ್ವೇಷವನ್ನು ಬಿತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ವಿವೇಕ್ ಅಗ್ನಿಹೋತ್ರಿ ಮಾಧ್ಯಮಗಳು ಹಾಗೂ ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ವಿವೇಕ್ ತಮ್ಮ ಸಿನಿಮಾ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಭಾಗ್ಯಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಹೈದರಾಬಾದ್ನಲ್ಲಿ ದೇವಸ್ಥಾನದಿಂದ ಹೊರಬೀಳುತ್ತಿದ್ದಂತೆಯೇ ಮುಗಿಬಿದ್ದ ಪತ್ರಕರ್ತರು ಈ ಸಿನಿಮಾದ ಮೂಲಕ ನೀವು ದ್ವೇಷ ಹರಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಇದಕ್ಕೆ ಉತ್ತರ ನೀಡಿದ ವಿವೇಕ್, ಈ ಸಿನಿಮಾವು 1990ರಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನಾಧರಿಸಿ ನಿರ್ಮಿಸಲಾಗಿದೆ. ಮಾನವೀಯತೆಯನ್ನು ಉತ್ತೇಜಿಸುವುದು ನನ್ನ ಗುರಿಯಾಗಿದೆ. ನಾನು ದ್ವೇಷವನ್ನು ಪ್ರಚಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಆದರೆ ನಿಮ್ಮ ಸಿನಿಮಾ ದ್ವೇಷವನ್ನು ಹುಟ್ಟು ಹಾಕುತ್ತಿದೆ ಎಂದು ಪತ್ರಕರ್ತರೊಬ್ಬರು ವಿವೇಕ್ರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೂ ಉತ್ತರಿಸಿದ ವಿವೇಕ್, ಭಯೋತ್ಪಾದನೆಯ ವಿರುದ್ಧದ ಚಿತ್ರವು ದ್ವೇಷವನ್ನು ಹರಡಲು ಹೇಗೆ ಸಾಧ್ಯ..? ನಾನು ಭಯೋತ್ಪಾದನೆ ಹೇಗೆ ಇಡೀ ಸಂಸ್ಕೃತಿಯನ್ನು ನಾಶ ಪಡಿಸಿದೆ ಎಂಬುದರ ಬಗ್ಗೆ ಸಿನಿಮಾ ನಿರ್ಮಿಸಿದ್ದೇನೆ. ನನ್ನ ಸ್ವಂತ ದೇಶದಲ್ಲಿ ನಿಂತು ಈ ಬಗ್ಗೆ ನಾನು ಸ್ಪಷ್ಟನೆ ನೀಡಬೇಕು ಅಂದರೆ ಇದೆಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ವಿವೇಕ್ ಅಗ್ನಿಹೋತ್ರಿ ಬಳಿ ಈ ಜಾಗದಿಂದ ಕದಲುವಂತೆ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ವಿವೇಕ್, ನಾನೇಕೆ ಮಾಧ್ಯಮಗಳ ಜೊತೆ ಮಾತನಾಡಬಾರದು..? ನಾನು ಇಲ್ಲಿಂದ ಜಾಗ ಖಾಲಿ ಮಾಡಬೇಕು ಎಂಬುದಕ್ಕೆ ಒಂದು ಕಾರಣ ನೀಡಿ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ಪೊಲೀಸ್ ಸಿಬ್ಬಂದಿ ಇದು ದೇವಸ್ಥಾನ . ಹೀಗಾಗಿ ನೀವು ಇಲ್ಲಿಂದ ತೆರಳಬೇಕು ಎಂದಿದ್ದಾರೆ. ಇದಕ್ಕೆ ವಿವೇಕ್, ನೀವು ಮೊದಲು ಮಾಧ್ಯಮದವರನ್ನು ತಡೆಯಬೇಕೆ ಹೊರತು ನನ್ನನ್ನಲ್ಲ ಎಂದು ಹೇಳಿದ್ದಾರೆ.