ಗೋವಾ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಇಂದು ತನ್ನ 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ಗೋವಾ ಮಾಜಿ ಸಿಎಂ ದಿವಂಗತ ಮನೋಹರ್ ಪರ್ರಿಕ್ಕರ್ ಅವರ ಪುತ್ರ ಉತ್ಪಲ್ ಪರ್ರಿಕ್ಕರ್ ಅವರ ಹೆಸರು ನಾಪತ್ತೆಯಾಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.
1994 ರಿಂದ ಮನೋಹರ್ ಪರ್ರಿಕ್ಕರ್ ಸ್ಪರ್ಧಿಸುತ್ತಾ ಬಂದಿರುವ ಪಣಜಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಈ ಬಾರಿ ಕಣಕ್ಕಿಳಿಯಲು ಉತ್ಪಲ್ ಪರ್ರಿಕ್ಕರ್ ಬಹಳ ಉತ್ಸುಕರಾಗಿದ್ದಾರೆ. ಆದರೆ ಬಿಜೆಪಿಯು ಪಣಜಿ ಕ್ಷೇತ್ರಕ್ಕೆ ಅಟಾನಾಸಿಯೋ ಬಾಬುಶ್ ಮಾನ್ಸರೇಟ್ಗೆ ಮಣೆ ಹಾಕಿದೆ. ಮಾನ್ಸರೇಟ್ ಹಾಲಿ ಶಾಸಕ ಹಾಗೂ ಮಾಜಿ ಕಾಂಗ್ರೆಸ್ ನಾಯಕ.
ಉತ್ಪಲ್ರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ಹೇಳಿದ್ದರೂ ಸಹ ಪರ್ರಿಕ್ಕರ್ ಪುತ್ರ ಪಣಜಿಯಿಂದ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕಿದ್ದಾರೆ. ತಾವು ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವ ಮೂಲಕ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ.
ನಾನು ಪಣಜಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಶೀಘ್ರದಲ್ಲಿಯೇ ನನ್ನ ನಿಲುವನ್ನು ತಿಳಿಸುತ್ತೇನೆ ಎಂದು ಉತ್ಪಲ್ ಪರ್ರಿಕ್ಕರ್ ಹೇಳಿದ್ದಾರೆ.
ಮನೋಹರ್ ಪರ್ರಿಕ್ಕರ್ 1994ರಿಂದ ನಡೆದ ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಪಣಜಿ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಪ್ರಧಾನಿ ಮೋದಿ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರ್ರಿಕ್ಕರ್ 2015ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2017ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚಿಸಲು ಗೋವಾಕ್ಕೆ ಧಾವಿಸಿದ್ದರು. ನಂತರ ಅವರು ಪಣಜಿ ಉಪಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು.
ವರದಿಗಳ ಪ್ರಕಾರ ಬಿಜೆಪಿಯ ಉತ್ಪಲ್ಗೆ ಇನ್ನೆರಡು ಕ್ಷೇತ್ರಗಳ ಆಯ್ಕೆಯನ್ನು ನೀಡಿದೆ ಎನ್ನಲಾಗಿದೆ. ಆದರೆ ಪಕ್ಷದ ಈ ಪ್ರಸ್ತಾಪವನ್ನು ಉತ್ಪಲ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಉತ್ಪಲ್ ಪಕ್ಷದ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೇವೆ. ಬಿಜೆಪಿಯು ಎಂದಿಗೂ ಪರ್ರಿಕ್ಕರ್ ಕುಟುಂಬಕ್ಕೆ ಗೌರವವನ್ನು ನೀಡುತ್ತದೆ ಎಂದು ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಉತ್ಪಲ್ ಕಣಕ್ಕಿಳಿಯಬೇಕು ಎಂದುಕೊಂಡಿರುವ ಕ್ಷೇತ್ರದಲ್ಲಿ ಈಗಾಗಲೇ ಇರುವ ಶಾಸಕರಿಗೆ ಟಿಕೆಟ್ ನೀಡಲು ನಾವು ನಿರ್ಧರಿಸಿದ್ದೇವೆ. ಹೀಗಾಗಿ ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಇರುವುದು ನ್ಯಾಯವಲ್ಲ. ಇದೇ ಕಾರಣಕ್ಕಾಗಿ ನಾವು ಉತ್ಪಲ್ಗೆ ಇನ್ನೆರಡು ಕ್ಷೇತ್ರಗಳ ಆಯ್ಕೆಯನ್ನು ನೀಡಿದ್ದೇವೆ ಎಂದು ಹೇಳಿದರು.
ಈ ನಡುವೆ ಇತ್ತ ಆಮ್ ಆದ್ಮಿ ಪಕ್ಷವು ಉತ್ಪಲ್ ಪರ್ರಿಕ್ಕರ್ ಆಫರ್ ನೀಡಿದ್ದು, ತಮ್ಮ ಪಕ್ಷದಿಂದ ಗೋವಾ ವಿಧಾನಸಭಾ ಚುನಾವಣೆಯನ್ನು ಎದುರಿಸುವಂತೆ ಆಫರ್ ನೀಡಿದೆ.