
ರಣವೀರ್ ಸಿಂಗ್ ಲಂಬೋರ್ಗಿನಿ ಉರಸ್, ಮರ್ಸಿಡಿಸ್ ಮೇಬ್ಯಾಕ್ S500 ಮತ್ತು ಮರ್ಸಿಡಿಸ್-ಬೆನ್ಜ್ ಜಿಎಲ್ಎಸ್350ಡಿ ಸೇರಿದಂತೆ ವಿವಿಧ ವಾಹನಗಳನ್ನು ಹೊಂದಿದ್ದಾರೆ. ಅವುಗಳ ಪೈಕಿ ಆಸ್ಟನ್ ಮಾರ್ಟಿನ್ ಚಾಲನೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಆರೋಪಿಸಿರುವ ನೆಟ್ಟಿಗರೊಬ್ಬರು ತಮ್ಮ ಟ್ವೀಟ್‌ನಲ್ಲಿ ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ನಟನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
“ಮುಂಬೈ ಪೋಲೀಸರೇ, ದಯವಿಟ್ಟು ರಣವೀರ್ ಸಿಂಗ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಅವರು ನಿನ್ನೆ ಓಡಿಸಿದ ಕಾರು ಪರವಾನಗಿ ಮೀರಿದ್ದಾಗಿದೆ” ಎಂದು ಟ್ವಿಟರ್ನಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು ತಾವು ಮುಂಬೈ ಟ್ರಾಫಿಕ್ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಸದ್ಯಕ್ಕೆ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವ ವರದಿಯಾಗಿಲ್ಲ.
ಹಿಂದೊಮ್ಮೆ ಸಂದರ್ಶನದಲ್ಲಿ ರಣವೀರ್ ಸಿಂಗ್, ಈ ವಾಹನ ತಮಗೆ ಬಹಳ ಅಚ್ಚುಮೆಚ್ಚು. ಇದಕ್ಕಾಗಿ ಬಹಳ ವೆಚ್ಚ ಮಾಡಿರುವುದಾಗಿ ಹೇಳಿಕೊಂಡಿದ್ದರು. ಈ ಕಾರನ್ನು ತಮ್ಮ ಇಚ್ಛೆಯಂತೆ ಮಾರ್ಪಾಡು ಮಾಡಿಕೊಳ್ಳಲು 3.9 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.