ಪನಾಮ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಬಾಲಿವುಡ್ ನಟಿ ಐರ್ಶಯಾ ರೈ ಬಚ್ಚನ್ರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು.
ತೆರಿಗೆಯನ್ನು ತಪ್ಪಿಸಲು ಕಡಲಾಚೆಯ ದ್ವೀಪಗಳಲ್ಲಿ ಹೇಗೆ ಕಂಪನಿಗಳನ್ನು ಸ್ಥಾಪಿಸಲಾಗಿದೆ ಅನ್ನೋದನ್ನು ಪನಾಮ ಪೇಪರ್ಸ್ ತೋರಿಸಿದ ಬಳಿಕ ಜಾರಿ ನಿರ್ದೇಶನಾಲಯ ಪಿಎಂಎಲ್ಎ ಪ್ರಕರಣವನ್ನು ದಾಖಲು ಮಾಡಿದೆ.
ಸಾಕಷ್ಟು ಮಾಧ್ಯಮಗಳ ವರದಿಯ ಬಳಿಕ ನಟಿ ಐಶ್ವರ್ಯಾ ರೈ ಬಚ್ಚನ್ರನ್ನು ಇಡಿ ವಿಚಾರಣೆಗೆ ಹಾಜರುಪಡಿಸಿದೆ.
ಇಂದು ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗುವಂತೆ ಐಶ್ವರ್ಯಾ ರೈಗೆ ಇಡಿ ಸಮನ್ಸ್ ನೀಡಿತ್ತು. ಇದಕ್ಕೂ ಮುನ್ನ ಸೆಕ್ಷನ್ 37 ಫೆಮಾ ಅಡಿಯಲ್ಲಿ ನಟಿ ಐಶ್ವರ್ಯಾರಿಗೆ ನವೆಂಬರ್ 9ರಂದು ಇಡಿ ಸಮನ್ಸ್ ನೀಡಿತ್ತು. ಮುಂಬೈನಲ್ಲಿರುವ ನಟಿ ಐಶ್ವರ್ಯಾ ರೈ ನಿವಾಸ ಪ್ರತೀಕ್ಷಾಗೆ ಇಡಿ ಸಮನ್ಸ್ ಕಳುಹಿಸಿದೆ. ಈ ಸಮನ್ಸ್ಗೆ 15 ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಇಡಿ ಸೂಚನೆ ನೀಡಿದೆ.
ವರದಿಗಳ ಪ್ರಕಾರ ಹಣ ವರ್ಗಾವಣೆ ತಡೆ ಕಾಯ್ದೆ (2002) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಮನಿ ಲಾಂಡರಿಂಗ್ ಪ್ರಕರಣ ದಾಖಲು ಮಾಡಿದೆ. ಇಡಿ ಇಂದು ಕಚೇರಿಗೆ ಹಾಜರಾಗುವಂತೆ ನಟಿ ಐಶ್ವರ್ಯಾರಿಗೆ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಅವರು ಇಂದು ನವದೆಹಲಿಯ ಇಡಿ ಕಛೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಐಶ್ವರ್ಯಾರನ್ನು ಇಂದಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ಇಡಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಅಧಿಕೃತ ಮಾಹಿತಿ ನೀಡಿದ್ದಾರೆ. ನಾವು ಅವರಿಗೆ ಇಂದು ತನಿಖೆಗೆ ಹಾಜರಾಗುವಂತೆ ಹೇಳಿದ್ದೆವು. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಸಮನ್ಸ್ನ್ನು ಮುಂಬೈನಲ್ಲಿರುವ ಅವರ ನಿವಾಸಕ್ಕೆ ಕಳುಹಿಸಲಾಗಿತ್ತು. ಆ ಬಳಿಕ ಅವರು ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.