ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಗುಜರಾತ್ನ ವಜ್ರದ ಉದ್ಯಮಿ ಹಾಗೂ ಬಿಲಿಯೇನರ್ ಸಾವ್ಜಿ ದೋಲಾಕಿಯಾರಿಗೆ ಕುಟುಂಬಸ್ಥರು ಹೊಚ್ಚ ಹೊಸ ಹೆಲಿಕಾಪ್ಟರ್ನ್ನು ಉಡುಗೊರೆ ರೂಪದಲ್ಲಿ ನೀಡಿದ್ದರು.
ದೋಲಾಕಿಯಾ ಸಹೋದರರಾದ ಹಿಮ್ಮತ್ಭಾಯ್ ದೋಲಾಕಿಯಾ, ತುಳಸಿಬಾಯಿ ದೋಲಾಕಿಯಾ ಹಾಗೂ ಘನ್ಶ್ಯಾಮಬಾಯಿ ದೋಲಾಕಿಯಾ ಅವರ ಎಂಟು ಮಕ್ಕಳು ಸೇರಿದಂತೆ ಎಲ್ಲಾ ಕುಟುಂಬಸ್ಥರು ಸಾವ್ಜಿ ಸಾಧನೆಯನ್ನು ಅಭಿನಂದಿಸಲು ಹೆಲಿಕಾಪ್ಟರ್ ನೀಡುತ್ತಿರುವ ಬಗ್ಗೆ ಇದೇ ಫೆಬ್ರವರಿ 1ರಂದು ಆಶ್ಚರ್ಯಕರ ಘೋಷಣೆಯನ್ನು ಮಾಡಿದ್ದರು.
ಕುಟುಂಬಸ್ಥರು ನೀಡಿರುವ ಈ 50 ಕೋಟಿ ರೂಪಾಯಿ ಮೌಲ್ಯದ ಹೊಚ್ಚ ಹೊಸ ಹೆಲಿಕಾಪ್ಟರ್ನ್ನು ಕೇವಲ ವೈಯಕ್ತಿಕ ಬಳಕೆಗೆ ಇಟ್ಟುಕೊಳ್ಳಲು ಮನಸ್ಸು ಮಾಡದ ಸಾವ್ಜಿ ದೋಲಾಕಿಯಾ ಸೂರತ್ನ ಜನರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಬಳಕೆ ಮಾಡಲು ದಾನ ಮಾಡಿದ್ದಾರೆ.
ಸಾವ್ಜಿ ಅನೇಕ ಸಮಯಗಳಿಂದ ಸೂರತ್ ಜನರ ತುರ್ತು ಬಳಕೆಗೆ ಹೆಲಿಕಾಪ್ಟರ್ನ್ನು ಉಡುಗೊರೆಯಾಗಿ ನೀಡಲು ಯೋಚಿಸಿದ್ದರು. ಕುಟುಂಬಸ್ಥರು ಹೆಲಿಕಾಪ್ಟರ್ ನ್ನು ಉಡುಗೊರೆ ರೂಪದಲ್ಲಿ ನೀಡುತ್ತಿದ್ದಾರೆ ಎಂದು ತಿಳಿದ ತಕ್ಷಣವೇ ತಮ್ಮ ನಿರ್ಧಾರವನ್ನು ತ್ವರಿತವಾಗಿ ಘೋಷಿಸಿದ್ದಾರೆ.
ನನ್ನ ಕುಟುಂಬಸ್ಥರು ಇಂತಹದ್ದೊಂದು ದುಬಾರಿ ಉಡುಗೊರೆಯನ್ನು ನನಗೆ ನೀಡಬಹುದು ಎಂದು ನಾನು ಊಹಿಸಿಯೂ ಇರಲಿಲ್ಲ. ನನ್ನ ಕುಟುಂಬದವರು ನೀಡಿದ ಉಡುಗೊರೆಯನ್ನು ನಿರಾಕರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಈ ಉಡುಗೊರೆಯನ್ನು ನಾವು ಸಾರ್ವಜನಿಕ ಸೇವೆಗೆ ಬಳಕೆ ಮಾಡಲು ಇಚ್ಛಿಸುತ್ತೇನೆ ಎಂದು ಸಾವ್ಜಿ ಹೇಳಿದ್ದಾರೆ.