ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಅಧಿಕಾರ ಪಡೆಯಲು ಕಸರತ್ತು ನಡೆಸುತ್ತಿರುವ ಸಮಾಜವಾದಿ ಪಕ್ಷವು ತನ್ನದೇ ಆದ ರಣತಂತ್ರಗಳನ್ನು ಹೂಡುತ್ತಿದೆ.
ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಮುಂದಿನ ತಿಂಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಭದ್ರಕೋಟೆ ಕರ್ಹಾಲ್ನಲ್ಲಿ ಸ್ಫರ್ಧಿಸುವುದು ಕನ್ಫರ್ಮ್ ಆಗಿದೆ.
ಪಕ್ಷದ ಮೂಲಗಳು ಈ ವಿಚಾರವನ್ನು ಮೊದಲೇ ತಿಳಿಸಿದ್ದವು. ಆದರೆ ಇಂದು ಅಖಿಲೇಶ್ ಯಾದವ್ ಸಂಬಂಧಿ ಹಾಗೂ ರಾಜ್ಯಸಭಾ ಸದಸ್ಯ ರಾಮ್ ಗೋಪಾಲ್ ಯಾದವ್ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ನನ್ನ ಸೋದರಳಿಯ ಕರ್ಹಾಲ್ನಲ್ಲಿ ಸ್ಪರ್ಧಿಸುತ್ತಾರೆ ಹಾಗೂ ಭಾರೀ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
1993ರಿಂದಲೂ ಕರ್ಹಾಲ್ನಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾ ಬಂದಿದ್ದಾರೆ. ಆದರೆ 2002ರಲ್ಲಿ ಬಿಜೆಪಿಯು ಈ ಕ್ಷೇತ್ರದಲ್ಲಿ ಜಯವನ್ನು ಸಾಧಿಸಿತ್ತು. ಅಖಿಲೇಶ್ ಯಾದವ್ ಕುಟುಂಬದ ಮೂಲ ಊರಾದ ಸೈಫಾಯಿಯಿಂದ ಕರ್ಹಾಲ್ ಕೇವಲ 5 ಕಿಲೋಮೀಟರ್ ಅಂತರದಲ್ಲಿದೆ.