ಪಂಜಾಬ್ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಹಾಗೂ ಪುತ್ರಿ ಹರ್ಷಿತಾ ಪಕ್ಷದ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ಬಾರಿ ಮಾನ್ಗೆ ಸರ್ಕಾರವನ್ನು ನಡೆಸಲು ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ.
ದೆಹಲಿ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಂಡಿರುವ ವಿಚಾರವಾಗಿ ಮಾತನಾಡಿದ ಕೇಜ್ರಿವಾಲ್ ಪುತ್ರಿ ಹರ್ಷಿತಾ ದೆಹಲಿಯ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಂಡ ಬಗ್ಗೆ ವಿಶ್ವದಾದ್ಯಂತ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ನಾವು ಈ ದೇಶದಲ್ಲಿಯೇ ಇದ್ದುಕೊಂಡು ಇದರ ಅಭಿವೃದ್ಧಿಗೆ ಶ್ರಮಿಸಬೇಕು. ಇದೇ ದೇಶದಲ್ಲಿದ್ದು ಇದೇ ದೇಶಕ್ಕೆ ಸೇವೆ ಸಲ್ಲಿಸಬೇಕೆಂದು ನಾನು ವಿದೇಶಕ್ಕೆ ಹೋಗಲಿಲ್ಲ ಎಂದು ಹರ್ಷಿತಾ ಹೇಳಿದ್ದಾರೆ.
ಪಂಜಾಬ್ನಲ್ಲಿಯೂ ಅರವಿಂದ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ಗೆ ಒಂದು ಅವಕಾಶ ಮಾಡಿಕೊಡಿ. ಈ ಬಾರಿ ಭಗವಂತ್ ಮಾನ್ರನ್ನು ಪಂಜಾಬ್ನ ಸಿಎಂ ಆಗಿ ಆಯ್ಕೆ ಮಾಡಿ ಎಂದು ಹರ್ಷಿತಾ ಮನವಿ ಮಾಡಿದರು.
ಕೇಜ್ರಿವಾಲ್ ಅವರ ಪತ್ನಿ ಕೂಡ ಭಗವಂತ್ ಮಾನ್ ಅವರ ಪರವಾಗಿ ಪ್ರಚಾರ ಮಾಡಿದ್ದು, ಅವರು ಕೇಜ್ರಿವಾಲ್ ಅವರಿಗೆ ಸಹೋದರರಂತೆ ಎಂದು ಹೇಳಿದ್ದಾರೆ. ಭಗವಂತ್ ಮಾನ್ ಓರ್ವ ಪ್ರಾಮಾಣಿಕ ವ್ಯಕ್ತಿ. ಇವರ ಕನಸು ನನಸು ಮಾಡಲು ಸಹಾಯ ಮಾಡಿ ಎಂದು ಮನವಿ ಮಾಡಿದರು.