ನೂರಾರು ಮೈಲುಗಳನ್ನು ದಾಟಿ ಯುಕೆಯ ಪಬ್ ವೊಂದರ ಬಳಿ ತಿರುಗಾಡಿದ ಬೇಬಿ ಸೀಲ್ ಅನ್ನು ಕಂಡು ಹಲವರು ದಿಗ್ಭ್ರಾಂತರಾಗಿರುವ ಘಟನೆ ನಡೆದಿದೆ.
ಸುಮಾರು 6 ರಿಂದ ಹನ್ನೆರಡು ತಿಂಗಳ ವಯಸ್ಸಿನ ಸೀಲ್ ಅನ್ನು ಜನವರಿ 2ರ ಭಾನುವಾರದಂದು ರಕ್ಷಿಸಲಾಗಿದೆ. 300 ಮೈಲಿಗಳನ್ನು ದಾಟಿ ಬಂದ ಸೀಲ್, ಹ್ಯಾನ್‌ಹ್ಯಾಮ್‌ನಲ್ಲಿರುವ ದಿ ಓಲ್ಡ್ ಲಾಕ್ ಅಂಡ್ ವೈರ್ ಎಂಬ ವಾಟರ್‌ಫ್ರಂಟ್ ಪಬ್‌ಗೆ ಎಂಟ್ರಿ ಕೊಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಪಬ್ ಮೇಲ್ವಿಚಾರಕ ಜಾನ್ ಜೆಫರೀಸ್, ನಿಯೋಪ್ರೆನ್ ಎಂಬ ಹೆಸರಿನ ಪುಟ್ಟ ಸೀಲ್ ಅನ್ನು ರಕ್ಷಿಸಿದ್ದಾರೆ. ಸೀಲ್ ಅನ್ನು ನೋಡಿದ ತಕ್ಷಣ ಪಬ್ ಮಾಲೀಕರು ಬ್ರಿಟಿಷ್ ಡೈವರ್ಸ್ ಮೆರೈನ್ ಲೈಫ್ ಪಾರುಗಾಣಿಕಾ ಸೇವೆಗೆ ಕರೆ ವಿಷಯ ತಿಳಿಸಿದ್ದಾರೆ. ಬಳಿಕ ಅದನ್ನು ಮರಳಿ ಸ್ಕಾಟ್ಲೆಂಡ್‌ಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.
ಜಾನ್ ಜೆಫರೀಸ್ ಅವರು ಪಬ್ ನಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾಗ ಸೀಲ್ ಅಡುಗೆ ಮನೆಗೆ ಎಂಟ್ರಿ ಕೊಟ್ಟಿದೆ ಎಂಬ ವಿಚಾರ ಅವರಿಗೆ ತಿಳಿಯಿತು. ಕೂಡಲೇ ಅದರ ರಕ್ಷಣೆಗೆ ಧಾವಿಸಿದ ಅವರು ಜೀವಿಗೆ ಯಾವುದೇ ಗಾಯವಾಗದಂತೆ ಹಿಡಿಯಲು ಪ್ರಯತ್ನಿಸಿದ್ದಾರೆ. ಹೆಚ್ಚಾಗಿ ನೀರಿನಲ್ಲೇ ಕಳೆಯುವ ಸೀಲ್, ಬಹಳ ಬಾಯಾರಿದಂತೆ ಕಂಡು ಬಂದಿತ್ತು. ಆಗಷ್ಟೇ ಮಳೆ ಬಂದಿದ್ದರಿಂದ ನೆಲ ತೇವವಾಗಿದ್ದು, ಒದ್ದೆ ಬಟ್ಟೆಗಳನ್ನು ನೆಲಕ್ಕೆ ಹಾಕಿ ರಕ್ಷಿಸಲಾಯಿತು ಎಂದು ಜಾನ್ ಹೇಳಿದ್ದಾರೆ.
ಆದರೆ, ಪುಟ್ಟ ಸೀಲ್ ಸ್ಥಳೀಯ ಪ್ರದೇಶದಿಂದ ಬಂದಿರಬಹುದು ಅಂತಾ ಅನ್ಕೊಂಡಿದ್ದ ಎಲ್ಲರೂ ಅದು ಸ್ಕಾಟ್ಲೆಂಡ್ ನಿಂದ ಬಂದಿದೆ ಎಂದು ತಿಳಿದಾಗ ಆಶ್ಚರ್ಯಕ್ಕೊಳಗಾಗಿದ್ದಾರೆ. ಸೀಲ್ ಅನ್ನು ಸುರಕ್ಷಿತವಾಗಿ ಮರಳಿ ಸ್ಕಾಟ್ಲೆಂಡ್ ಗೆ ಕರೆದೊಯ್ಯಲಾಗಿದೆ.