ದಿನಾ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಅಂಶ ದೇಹಕ್ಕೆ ಸಿಗುತ್ತದೆ. ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ ನಾವು ಕುಡಿಯುತ್ತಿರುವುದು ಹಾಲಿನ ಬದಲು ಹಾಲಾಹಲವಾಗಿದ್ದರೆ ಆರೋಗ್ಯದ ಗತಿಯೇನು….?
ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಹಾಲಿನ ಹಾವಳಿ ಹೆಚ್ಚಾಗಿದೆ. ಇದನ್ನು ಸೇವಿಸಿದರೆ ನಮ್ಮ ಆರೋಗ್ಯವನ್ನು ನಾವೇ ಕೈಯಾರೆ ಹಾಳು ಮಾಡಿಕೊಂಡ ಹಾಗೇ ಆಗುತ್ತದೆ. ನಾವು ಹಣ ಕೊಟ್ಟು ಮನೆಗೆ ತರುವ ಈ ಹಾಲು ಶುದ್ಧವೋ, ವಿಷವೋ ಎಂದು ತಿಳಿಯಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಹಾಲಿಗೆ ನೀರು, ಯೂರಿಯಾ, ಸಿಂಥೆಟಿಕ್ಸ್, ಪಿಷ್ಠ, ವಾಷಿಂಗ್ ಪೌಡರ್, ರಿಫೈನ್ಡ್ ಎಣ್ಣೆ ಮೊದಲಾದವುಗಳನ್ನು ಸೇರಿಸಿ ಕಲಬೆರೆಕೆ ಮಾಡಿದ ಹಾಲನ್ನು ನಕಲಿ ಹಾಲು ತಯಾರಕರು ಮಾರುತ್ತಾರೆ. ಇದನ್ನು ಕುಡಿದರೆ ಆರೋಗ್ಯ ಹಾಳಾಗುವುದಂತೂ ಗ್ಯಾರಂಟಿ.
ಮೃದುವಾದ ಮೇಲ್ಮೈ ಮೇಲೆ ಹಾಲಿನ ಒಂದೆರೆಡು ಹನಿಗಳನ್ನು ಹಾಕಿ. ಈ ಹಾಲು ಹಾಕಿದ ಜಾಗದಲ್ಲಿ ಬಿಳಿಯ ಗುರುತುಗಳು ಕಾಣಿಸಿಕೊಂಡರೆ ಆ ಹಾಲು ಸೇವಿಸಲು ಯೋಗ್ಯವೆಂದು. ಇನ್ನು ಗುರುತು ಮೂಡಿಸದೇ ಇದ್ದರೆ ಅದು ರಾಸಾಯನಿಕ ಹಾಲು.
ಒಂದು ಚಿಕ್ಕ ಬೌಲ್ ನಲ್ಲಿ ಸ್ವಲ್ಪ ಹಾಲು ತೆಗೆದುಕೊಂಡು ಅದಕ್ಕೆ ಸೋಯಾಬೀನ್ ಪೌಡರ್ ಹಾಕಿ. ಚೆನ್ನಾಗಿ ಅಲ್ಲಾಡಿಸಿ. ಸ್ವಲ್ಪ ಹೊತ್ತು ಬಿಟ್ಟು ಕೆಂಪು ಲಿಟ್ಮಸ್ ಪೇಪರ್ ತೆಗೆದುಕೊಂಡು ಇದಕ್ಕೆ ಅದ್ದಿ. ಕಾಗದದ ಬಣ್ಣ ನೀಲಿಯಾಗಿ ಕಾಣಿಸಿಕೊಂಡರೆ ಅದರಲ್ಲಿ ಯೂರಿಯಾ ಅಂಶ ಇದೆ ಎಂದು ಅರ್ಥ.
ಇನ್ನು ಹಾಲಿಗೆ ಅಯೋಡಿನ್ ಹನಿ ಹಾಕಿದರೆ ಅದು ಕೆಲವೇ ಸಮಯದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹಾಗಾದ್ರೆ ಅದರಲ್ಲಿ ಪಿಷ್ಟ ಸೇರಿಸಿದ್ದಾರೆ ಎಂದರ್ಥ
ಒಂದು ಸಣ್ಣ ಬೌಲ್ ನಲ್ಲಿ ಸ್ವಲ್ಪಹಾಲು ತೆಗೆದುಕೊಂಡು ಅದಕ್ಕೆ 0.1 ಬಿಎಸ್ ಪಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಗ ಅದರ ಬಣ್ಣ ಕೆನ್ನೆರಳೆ ಬಂದರೆ ಅದರಲ್ಲಿ ಸೋಪಿನ ಪುಡಿ ಮಿಶ್ರಣ ಮಾಡಿದ್ದಾರೆ ಎಂದರ್ಥ.
ಹಾಗೇ ಮಾರುಕಟ್ಟೆಯಲ್ಲಿ ಲ್ಯಾಕ್ಟೋಮೀಟರ್, ಮಿಲ್ಕ್ ಟೆಸ್ಟಿಂಗ್ ಕಿಟ್ ಗಳ ಮೂಲಕವೂ ಈ ಕಲಬೆರಕೆ ಹಾಲನ್ನು ಕಂಡು ಹಿಡಿಯಬಹುದು.