ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕುಡಿಯುವ ನೀರಿಗೂ ಬರ ಬಂದಿದೆ. ಮಹಿಳೆಯರು ಜೀವಜಲಕ್ಕಾಗಿ ಬಾವಿಯೊಳಗೇ ಇಳಿಯಬೇಕಾದ ಪರಿಸ್ಥಿತಿ ಬಂದೊದಗಿದೆ. ನಾಸಿಕ್‌ನ ರೋಹಿಲೆ ಗ್ರಾಮದಲ್ಲಿ ಮಹಿಳೆಯರು ಬಾವಿಯೊಳಕ್ಕೆ ಇಳಿದು ಚಿಕ್ಕ ಚಿಕ್ಕ ಬಕೆಟ್ ಹಾಗೂ ಕ್ಯಾನ್ ಗಳಲ್ಲಿ ನೀರು ತುಂಬಿಸಿಕೊಂಡು ತರುತ್ತಿದ್ದಾರೆ.
ಈ ಅಪಾಯಕಾರಿ ಸಾಹಸದ ವಿಡಿಯೋ ಕೂಡ ಸಿಕ್ಕಿದೆ. ಮಹಿಳೆಯರು ಬಾವಿಯೊಳಗೆ ಇಳಿದು ಏಣಿಯ ಮೇಲೆ ನೇತಾಡುತ್ತ ನೀರನ್ನು ತುಂಬಿಸಿಕೊಳ್ತಿದ್ದಾರೆ. ಹಗ್ಗದ ಇನ್ನೊಂದು ತುದಿಯನ್ನು ಹಿಡಿದು ಉಳಿದ ಮಹಿಳೆಯರು ನೀರನ್ನು ಮೇಲಕ್ಕೆತ್ತುತ್ತಿದ್ದಾರೆ. ಸ್ವಲ್ಪ ಕಾಲು ಜಾರಿದ್ರೂ ಮಹಿಳೆಯರು ಬಾವಿಯೊಳಕ್ಕೆ ಬೀಳುವ ಅಪಾಯವಿದೆ.
ಆದ್ರೆ ಕುಡಿಯುವ ನೀರೇ ಇಲ್ಲದಿರುವುದರಿಂದ ತಮಗೆ ಬಾವಿಯೊಳಗೆ ಇಳಿಯದೇ ಬೇರೆ ದಾರಿಯಿಲ್ಲ ಎಂದು ಮಹಿಳೆಯರು ಅಸಹಾಯಕತೆಯಿಂದ ನುಡಿದಿದ್ದಾರೆ. ಈ ಬಾವಿ ಕೂಡ ಗ್ರಾಮದಿಂದ 2 ಕಿಮೀ ದೂರದಲ್ಲಿದೆ. ಇಷ್ಟೆಲ್ಲಾ ಹರಸಾಹಸಪಟ್ಟು ಬಿಂದಿಗೆಗೆ ನೀರು ತುಂಬಿಸಿಕೊಂಡು ಮಹಿಳೆಯರು 2 ಕಿಮೀ ದೂರ ನಡೆದು ತಮ್ಮ ಗ್ರಾಮವನ್ನು ಸೇರಿಕೊಳ್ತಿದ್ದಾರೆ.
ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಗ್ರಾಮಕ್ಕೆ ಸೂಕ್ತ ನೀರಿನ ಸೌಲಭ್ಯ ಒದಗಿಸಬೇಕೆಂದು ಮಹಿಳೆಯರು ಮನವಿ ಮಾಡಿಕೊಂಡಿದ್ದಾರೆ.