ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಹಾಗೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವ್ಲಾಡಿಮಿಟರ್ ಪುಟಿನ್ ರಷ್ಯಾ ಹಾಗೂ ಉಕ್ರೇನ್ ನಡುವೆ ಘರ್ಷಣೆ ನಡೆಯುವುದು ಅನಿವಾರ್ಯವಾಗಿದೆ. ಅಲ್ಲದೇ ಉಕ್ರೇನಿಯನ್ ಸೇನಾ ಸದಸ್ಯರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮನೆಗೆ ಹೋಗಬೇಕು ಎಂದು ಹೇಳಿದ್ದರು. ಅಲ್ಲದೇ ರಷ್ಯಾ ಕೈಗೊಂಡ ಕ್ರಮಗಳಲ್ಲಿ ಹಸ್ತಕ್ಷೇಪವನ್ನು ಮಾಡಲು ಬೇರೆ ಯಾವುದೇ ದೇಶಗಳು ಮುಂದಾದರೆ ಅವರು ಈ ಹಿಂದೆಂದೂ ನೋಡಿರದ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ವ್ಲಾಡಿಮಿರ್ ಪುಟಿನ್ ಉಕ್ರೇನ್ನ ವಿರುದ್ಧ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಕೈವ್ ಹಾಗೆ ಖಾರ್ಕಿವ್ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಸ್ಫೋಟವು ಉಂಟಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಟ್ವೀಟ್ ಮಾಡಿದ ಉಕ್ರೇನ್ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಪುಟಿನ್ ಇದೀಗ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಆರಂಭಿಸಿದ್ದಾರೆ. ಶಾಂತಿಯುತವಾಗಿದ್ದ ಉಕ್ರೇನ್ನ ನಗರಗಳು ಇದೀಗ ಅಪಾಯದಲ್ಲಿವೆ. ಇದೊಂದು ಆಕ್ರಮಣಕಾರಿ ಯುದ್ಧವಾಗಿದೆ. ಆದರೆ ಇವೆಲ್ಲದರಿಂದ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಹಾಗೂ ಗೆಲ್ಲುತ್ತದೆ. ಇಡೀ ವಿಶ್ವವು ಪುಟಿನ್ರನ್ನು ತಡೆಹಿಡಿಯಬಹುದು ಹಾಗೂ ತಡೆಹಿಡಿಯಲೇಬೇಕು ಎಂದು ಕರೆ ನೀಡಿದ್ದಾರೆ.