ವಾಹನಗಳಿಗೆ ನಂಬರ್ ಪ್ಲೇಟ್ ನಲ್ಲಿ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿದರೆ ಬೇರೆ ಏನನ್ನೂ ಬರೆದುಕೊಳ್ಳಬಾರದು ಎಂಬ ಕಾನೂನಿದೆ. ಆದರೆ, ಪಡ್ಡೆ ಹುಡುಗರು ತಮ್ಮ ವಾಹನಗಳಿಗೆ ತಮಗಿಷ್ಟವಾದ ರೀತಿಯಲ್ಲಿ ಹೆಸರುಗಳನ್ನು ನೋಂದಣಿ ಸಂಖ್ಯೆ ಕಾಣದ ರೀತಿಯಲ್ಲಿ ಬರೆಯಿಸಿಕೊಳ್ಳುತ್ತಾರೆ. ಇಂತಹವರಿಗೆ ದಂಡಗಳನ್ನೂ ವಿಧಿಸಲಾಗುತ್ತಿದ್ದರೂ ಈ ಖಯಾಲಿ ನಿಂತಿಲ್ಲ.
ಇಂತಹದ್ದೇ ಪ್ರಕರಣ ಉತ್ತರಖಂಡದಲ್ಲಿ ವರದಿಯಾಗಿದ್ದು, ಅಲ್ಲಿ ನಿಸಾನ್ ಕೈಗರ್ ಕಾರಿನ ನಂಬರ್ ಪ್ಲೇಟ್ ಮೇಲೆ ನೋಂದಣಿ ಸಂಖ್ಯೆಗೆ ಬದಲು `ಪಾಪಾ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ವಾಹನದ ಮಾಲೀಕನಿಗೆ ದಂಡ ವಿಧಿಸಿ ಈ ರೀತಿ ಹಾಕಿಕೊಳ್ಳದಿರುವಂತೆ ಎಚ್ಚರಿಕೆ ನೀಡಿದ್ದಾರೆ.
ಈ ವಾಹನದ ಮೇಲೆ ನೋಂದಣಿ ಸಂಖ್ಯೆಗೆ ಬದಲು `ಪಾಪಾ’ ಎಂದು ಬರೆದದ್ದರ ಬಗ್ಗೆ ಟ್ವಿಟರ್ ಸೇರಿದಂತೆ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಇಂತಹ ಕಾನೂನಿಗೆ ವಿರುದ್ಧವಾಗಿರುವ ಈ ಪ್ರಕರಣವನ್ನು ಕಂಡೂ ಕಾಣದಂತೆ ಪೊಲೀಸರು ಇದ್ದಾರೆ ಎಂದು ಕಿಡಿಕಾರಿದ್ದರು.
ಈ ಬಗ್ಗೆ ಅನೇಕ ದೂರುಗಳೂ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರನ್ನು ಮತ್ತು ಅದರ ಮಾಲೀಕರನ್ನು ಪತ್ತೆ ಮಾಡಿ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಕಾರಿನ ಮೇಲೆ `ಪಾಪಾ’ ಎಂದು ಬರೆದುಕೊಂಡಿದ್ದ ಚಿತ್ರವನ್ನು ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಪೊಲೀಸರು, ʼಪಾಪ ಕೆಹತೇ ಬಡಾ ನಾಮ್ ಕರೇಗಾ’ ಎಂಬ ಹಿಂದಿ ಹಾಡಿನ ತುಣುಕನ್ನು ಹಾಕಿ, ಈ ರೀತಿ ಬರೆದರೆ ದಂಡ ಕಟ್ಟಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
https://twitter.com/uttarakhandcops/status/1546881890019225600?ref_src=twsrc%5Etfw%7Ctwcamp%5Etweetembed%7Ctwterm%5E1546881890019225600%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fauto%2Futtarakhand-police-issues-challan-to-car-owner-with-papa-written-on-number-plate-check-pics-2485112.html