ಮಹಾರಾಷ್ಟ್ರದ ಪಿಂಪ್ರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ 52 ವರ್ಷದ ವ್ಯಕ್ತಿಯೊಬ್ಬರು ಕಾರ್ಡಿಯಾಕ್ ಅರೆಸ್ಟ್ನಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಭಾರತವು ತನ್ನ ಮೊದಲ ಓಮಿಕ್ರಾನ್ ಸಾವನ್ನು ದಾಖಲಿಸಿದೆ.
ಆದರೆ ಈ ವ್ಯಕ್ತಿಯು ತನ್ನ ಬೇರೆಯ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಇದನ್ನು ಓಮಿಕ್ರಾನ್ ರೂಪಾಂತರಿಯ ಮೊದಲ ಸಾವು ಎಂದು ಘೋಷಣೆ ಮಾಡದೇ ಇರಲು ನಿರ್ಧರಿಸಲಾಗಿದೆ.
ಮೃತ ವ್ಯಕ್ತಿಯು ಅನೇಕ ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ನೈಜೀರಿಯಾದಿಂದ ಮಹಾರಾಷ್ಟ್ರಕ್ಕೆ ಆಗಮಿಸಿದ್ದರು. ಮಂಗಳವಾರ ಪಿಂಪ್ರಿಯ ಚಿಂಚ್ವಾಡ್ನಲ್ಲಿರುವ ವೈಬಿ ಚವಾಣ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರಿಗೆ ಓಮಿಕ್ರಾನ್ ಸೋಂಕು ತಗುಲಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸತತ ಎರಡನೇ ದಿನವೂ ಓಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದೇ ಕಾರಣಕ್ಕೆ ವಾಣಿಜ್ಯ ನಗರಿ ಮುಂಬೈನಲ್ಲಿ ಜನವರಿ 7ನೇ ತಾರೀಖಿನವರೆಗೆ ಸೆಕ್ಷನ್ 144 ಜಾರಿಯಲ್ಲಿದೆ.
ದೇಶದಲ್ಲಿ ಓಮಿಕ್ರಾನ್ ರೂಪಾಂತರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 450 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಇದ್ದು ಇಲ್ಲಿ 320 ಪ್ರಕರಣಗಳು ವರದಿಯಾಗಿದೆ. ಗುಜರಾತ್ನಲ್ಲಿ 97, ತೆಲಂಗಾಣ 62, ಆಂಧ್ರ ಪ್ರದೇಶದಲ್ಲಿ 16, ಹರಿಯಾಣ ಹಾಗೂ ಓಡಿಶಾಗಳಲ್ಲಿ ತಲಾ 14 ಮತ್ತು ಪಶ್ಚಿಮ ಬಂಗಾಳದಲ್ಲಿ 11 ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.