ದೇವರ ಮೂರ್ತಿ ಮೇಲೆ ಕಾಲಿಟ್ಟು ಅಭಿಷೇಕ ಮಾಡುತ್ತಿರುವ ಅರ್ಚಕರೊಬ್ಬರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿ ಶಾಕ್ ಆಗಿದ್ದ ಭಕ್ತರು, ಅರ್ಚಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.
ಈ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಬಳ್ಳೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದಿತ್ತು ಎಂದು ಹೇಳಲಾಗಿದ್ದು, ಅರ್ಚಕ ಮಹೇಶ್ವರಯ್ಯ ಸ್ವಾಮಿ ದೇವರ ಮೂರ್ತಿಯ ತಲೆ ಮೇಲೆ ತಮ್ಮ ಕಾಲಿಟ್ಟಿದ್ದರೆ, ಸಹಾಯಕ ಇವರ ಕಾಲಿಗೆ ನೀರು ಹಾಕಿದ್ದ. ಈ ರೀತಿ ಅಭಿಷೇಕ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಅರ್ಚಕ ಮಹೇಶ್ವರಯ್ಯ ಸ್ವಾಮಿ ತಮ್ಮ ಈ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದು, ಈ ಹಿಂದೆ ಆ ರೀತಿಯ ಸಂಪ್ರದಾಯ ಇತ್ತು. ಅದನ್ನು ಈಗ ನಿಲ್ಲಿಸಲಾಗಿದೆ. ಆದರೂ ಕೂಡ ನನ್ನಿಂದ ತಪ್ಪಾಗಿದ್ದು ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ.