ಕೊರೊನಾ ಲಸಿಕೆಗಳನ್ನು ಹಾಕಿಕೊಳ್ಳಲು ಇಷ್ಟಪಡದವರಿಗೆ ನಕಲಿ ವ್ಯಾಕ್ಸಿನ್ ಪ್ರಮಾಣ ಪತ್ರವನ್ನು ಮಾರಾಟ ಮಾಡಲು 60 ವರ್ಷದ ವೃದ್ಧರೊಬ್ಬರು ಜರ್ಮನಿಯಲ್ಲಿ 90 ಲಸಿಕೆಗಳನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪೂರ್ವ ಜರ್ಮನಿಯ ನಗರವಾದ ಮ್ಯಾಗ್ಡೆಬರ್ಗ್ನ ವ್ಯಕ್ತಿ ಇವರಾಗಿದ್ದು ಜರ್ಮನ್ ಗೌಪ್ಯತೆಯ ನಿಯಮಗಳಿಗೆ ಅನುಗಣವಾಗಿ ಹೆಸರನ್ನು ಬಹಿರಂಗಪಡಿಸಿಲ್ಲ. ಪೊಲೀಸರ ಕೈಗೆ ಸಿಕ್ಕಿಬೀಳದೆ ಸ್ಯಾಕ್ಸೋನಿಯ ಲಸಿಕಾ ಕೇಂದ್ರಗಳಲ್ಲಿ ಕೋವಿಡ್ 19ನ 90 ಡೋಸ್ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
ಶಂಕಿತನನ್ನು ಬಂಧಿಸಲಾಗಿಲ್ಲ. ಆದರೆ ಲಸಿಕೆ ಪ್ರಮಾಣ ಪತ್ರಗಳನ್ನು ಅನಧಿಕೃತವಾಗಿ ವಿತರಣೆ ಮಾಡಿದ ಸಲುವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಸತತ 2ನೇ ದಿನ ಕೋವಿಡ್ 19 ಡೋಸ್ ಪಡೆಯಲು ಹೋದಾಗ ಸ್ಯಾಕ್ಸೋನಿಯ ಐಲೆನ್ ಬರ್ಗ್ನಲ್ಲಿರುವ ಲಸಿಕಾ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಈ ವ್ಯಕ್ತಿಯ ಕೈನಿಂದ ಹಲವಾರು ನಕಲಿ ಲಸಿಕೆ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ.