ಯುದ್ಧಪೀಡಿತ ಉಕ್ರೇನ್ನ ಖಾರ್ಕಿವ್ ನಗರದಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಶೆಲ್ ದಾಳಿಗೆ ಕನ್ನಡಿಗ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ವಿದ್ಯಾರ್ಥಿಯನ್ನು ನವೀನ್ ಶೇಖರಪ್ಪ ಗ್ಯಾನಗೌಡರ್ ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಯು ಆಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆಯಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಉಕ್ರೇನ್ನಲ್ಲಿ ನವೀನ್ ಶೇಖರಪ್ಪ ಎಂಬವರ ದುರದೃಷ್ಟಕರ ಸಾವನ್ನು ವಿದೇಶಾಂಗ ಸಚಿವಾಲಯದಿಂದ ಧೃಡಪಡಿಸಿದೆ. ಮೃತ ನವೀನ್ ಹಾವೇರಿಯ ಚಳಗೇರಿಯವರು. ನವೀನ್ ಅಗತ್ಯ ವಸ್ತುವನ್ನು ಖರೀದಿಸಲು ಹತ್ತಿರದ ಅಂಗಡಿಯೊಂದಕ್ಕೆ ತೆರಳಿದ್ದರು. ನವೀನ್ ಸ್ನೇಹಿತರು ಅವರು ಮೃತಪಟ್ಟ ಮಾಹಿತಿಯನ್ನು ತಿಳಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎಸ್ಡಿಎಂಎ ಆಯುಕ್ತ ಮನೋಜ್ ರಾಜನ್ ಹೇಳಿದರು.
ಇಂದು ಬೆಳಗ್ಗೆ ಖಾರ್ಕಿವ್ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂಬುದನ್ನು ನಾವು ಭಾರವಾದ ಹೃದಯದಿಂದ ಧೃಡೀಕರಿಸುತ್ತಿದ್ದೇವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.