ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಟೊಮೆಟೊ ಶತಕ ಬಾರಿಸಿ ಮುನ್ನುಗಿ ಹಲವು ದಿನಗಳೇ ಕಳೆಯುತ್ತಿದೆ. ಸದ್ಯಕ್ಕೆ ಬೆಲೆ ಕಡಿಮೆಯಾಗುವ ಲಕ್ಷಣಗಳೂ ಕಾಣುತ್ತಿಲ್ಲ.
ಸದ್ಯ ಟೊಮೆಟೊ ದರ ಕೆಜಿಗೆ 110 ರಿಂದ 150 ರೂಪಾಯಿ ಇದೆ. ಅಷ್ಟಕ್ಕೂ ರಾಜ್ಯದಲ್ಲಿ ಈ ಪರಿ ಟೊಮೆಟೊ ದರ ಏರಿಕೆಯಾಗಲು ಕಾರಣವಾದರೂ ಏನು? ಧಾರಾಕಾರ ಮಳೆ, ಎಲೆ ರೋಗ, ಕೀಟಬಾಧೆ ಇರಬಹುದು ಎಂದುಕೊಂಡರೆ ಅದು ತಪ್ಪು. ಕರ್ನಾಟಕದ ಟೊಮೆಟೊ ಬೆಲೆ ಗಗನಮುಖಿಯಾಗಲು ಉತ್ತರ ಭಾರತದ ಬೇಡಿಕೆ ಹೆಚ್ಚಾಗಿದ್ದು.
ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಟೊಮೆಟೊ ಸಿಗುತ್ತಿಲ್ಲ. ಹಾಗಾಗಿ ಅಲ್ಲಿನ ವರ್ತಕರು ಕರ್ನಾಟಕಕ್ಕೆ ಆಗಮಿಸಿ ಕೆಜಿಗೆ 150 ರಿಂದ 160 ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಗುಣಮಟ್ಟದ ಟೊಮೆಟೊಗಳನ್ನು ದುಪ್ಪಟ್ಟು ಹಣಕ್ಕೆ ಖರೀದಿಸುತ್ತಿರುವುದರಿಂದ ನಮ್ಮ ರಾಜ್ಯದಲ್ಲಿ ಪೂರೈಕೆ ಕಡಿಮೆಯಾಗಿದೆ. ಹಾಗಾಗಿ ರಾಜ್ಯದಲ್ಲಿ ಟೊಮೆಟೊ ಬೆಲೆ ಗಗನಮುಖಿಯಾಗಿದೆ. ಈ ಬಗ್ಗೆ ಕೆ ಎಫ್ ಸಿ ಸಿ ಐ ಮೂಲಗಳು ತಿಳಿಸಿವೆ.
ರಾಜಧಾನಿಯಲ್ಲಿ ಪ್ರಸ್ತುತ ಕೆಜಿ ಟೊಮೆಟೊಗೆ 100 ರಿಂದ 120 ರೂ. ಇದೆ. ಇನ್ನೂ 25 ದಿನಗಳ ಕಾಲ ಇದೇ ದರ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.