ಇದೊಂದು ಸಿಹಿ ಖಾದ್ಯ. ಹೆಸರೇ ಹೇಳುವಂತೆ ಇದು ಅಕ್ಕಿಯ ಪಾಯಸ. ಈ ಪಾಕವಿಧಾನ ಬಹಳ ಸರಳ ಹಾಗೂ ಸುಲಭ. ಹಬ್ಬಗಳ ಗಡಿಬಿಡಿ ಸಮಯದಲ್ಲಿ ಹಾಗೂ ಅಚಾನಕ್ ಬಂಧುಗಳು ಬಂದರೆ ಬಹುಬೇಗ ಈ ಪಾಯಸವನ್ನು ತಯಾರಿಸಬಹುದು. ಎಲ್ಲರೂ ಇಷ್ಟ ಪಡುವ ಈ ಸ್ವೀಟ್ ತಯಾರಿ ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಾಗ್ರಿಗಳು
ಕೆನೆ ಭರಿತ ಗಟ್ಟಿ ಹಾಲು – 1 ಲೀಟರ್
ನೆನೆಸಿಕೊಂಡ ಬಾಸುಮತಿ ಅಕ್ಕಿ -1/4 ಕಪ್
ಸಕ್ಕರೆ -7 ಚಮಚ
ಏಲಕ್ಕಿ ಪುಡಿ – 1 ಚಮಚ
ಹೆಚ್ಚಿಕೊಂಡ ಬಾದಾಮಿ -2 ಚಮಚ
ಗುಲಾಬಿ ನೀರಿನಲ್ಲಿ ನೆನೆಸಿಕೊಂಡ ಕೇಸರಿ – 5 ರಿಂದ 6
ಮಾಡುವ ವಿಧಾನ
ಮೊದಲು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕುದಿಯಲು ಇಡಬೇಕು. ಹಾಲು ಕುದಿಯಲು ಆರಂಭಿಸಿದ ಮೇಲೆ, ನೆನೆಸಿಕೊಂಡ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಕಲಕುತ್ತಿರಿ. ಬೇಯುತ್ತಾ ಬಂದಂತೆ ಉರಿಯನ್ನು ಸ್ವಲ್ಪ ಕಡಿಮೆ ಮಾಡುವುದರಿಂದ ಅಕ್ಕಿ ತಳ ಹಿಡಿಯುವುದನ್ನು ತಡೆಯಬಹುದು.
ಹಾಲಿನ ಪ್ರಮಾಣ ಕಡಿಮೆಯಾಗುತ್ತ ಬಂದ ನಂತರ ಸಕ್ಕರೆಯನ್ನು ಸೇರಿಸಿ ಹಾಗೇ ಎರಡು ನಿಮಿಷ ಕುದಿಯಲು ಬಿಡಿ. ಈಗ ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿ ಮತ್ತು ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.
ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಅಥವಾ ಪಾಯಸ ತಯಾರಾಗಿದೆ ಎಂದ ತಕ್ಷಣ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ. ಸರ್ವಿಂಗ್ ಬೌಲ್ ಗೆ ಹಾಕಿ ಅಕ್ಕಿ ಪಾಯಸ ಸವಿಯಲು ನೀಡಿ.