ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ರುಚಿಕರವಾದ ದಂಟಿನ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ. ಬಿಸಿಬಿಸಿ ಅನ್ನ, ಚಪಾತಿ ಜತೆ ಇದನ್ನು ಸವಿಯಲು ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ದಂಟಿನ ಸೊಪ್ಪು 2 ಕಟ್ಟು, ಜೀರಿಗೆ – 2 ಚಮಚ, ಒಣಮೆಣಸು – 1, ಹಸಿಮೆಣಸು – 2, ಬೆಳ್ಳುಳ್ಳಿ – 8 ಎಸಳು, ಎಣ್ಣೆ ಸ್ವಲ್ಪ, ಅರಿಸಿನ – ಚಿಟಿಕೆ, ಕರಿಬೇವು – 5 ಎಸಳು, ತೆಂಗಿನಕಾಯಿ ತುರಿ ಅರ್ಧ ಕಪ್.
ಮಾಡುವ ವಿಧಾನ:
ಮೊದಲಿಗೆ ದಂಟಿನ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೆ 1 ಚಮಚ ಜೀರಿಗೆ ಹಾಕಿ. ಒಣಮೆಣಸು ಸೇರಿಸಿ 4 ಎಸಳು ಬೆಳ್ಳುಳ್ಳಿ ಹಾಕಿ ಕೈಯಾಡಿಸಿ. ನಂತರ ಕತ್ತರಿಸಿಟ್ಟುಕೊಂಡ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಸೊಪ್ಪು ನೀರು ಬಿಡುವಾಗ ¼ ಕಪ್ ನೀರು ಸೇರಿಸಿ ಉಪ್ಪು ಹಾಕಿ ಬೇಯಲು ಬಿಡಿ.
ನಂತರ ಒಂದು ಮಿಕ್ಸಿ ಜಾರಿಗೆ ಹಸಿಮೆಣಸು, ಕಾಯಿತುರಿ, ಜೀರಿಗೆ 1 ಚಮಚ, ಅರಿಸಿನ, ಕರಿಬೇವು ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ಸೊಪ್ಪು ಬೆಂದ ಬಳಿಕ ಅದಕ್ಕೆ ಈ ರುಬ್ಬಿಕೊಂಡ ಮಿಶ್ರಣ ಸೇರಿಸಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರುಚಿಕರವಾದ ದಂಟಿನಸೊಪ್ಪಿನ ಪಲ್ಯ ಈಗ ಸವಿಯಲು ಸಿದ್ಧ.