ಅಡುಗೆ ಮಾಡುವುದಕ್ಕೆ ತರಕಾರಿ ಇಲ್ಲ ಅಥವಾ ದಿನಾ ಒಂದೇ ರೀತಿ ಸಾಂಬಾರು ತಿಂದು ತಿಂದು ಬೇಜಾರು ಅನ್ನುವರು ಒಮ್ಮೆ ಈ ಮೆಂತೆಕಾಳಿನ ತಂಬುಳಿ ಮಾಡಿಕೊಂಡು ಸವಿಯಿರಿ.
½ ಟೀ ಸ್ಪೂನ್-ಮೆಂತೆ ಕಾಳು, 1 ಟೀ ಸ್ಪೂನ್-ಜೀರಿಗೆ, 2 ಒಣ ಮೆಣಸು, 1 ಕಪ್-ಮೊಸರು, ½ ಕಪ್-ತೆಂಗಿನಕಾಯಿ ತುರಿ, 1 ಟೀ ಸ್ಪೂನ್-ಎಣ್ಣೆ, ½ ಟೀ ಸ್ಪೂನ್-ಸಾಸಿವೆ, ½ ಟೀ ಸ್ಪೂನ್-ಉದ್ದಿನ ಬೇಳೆ, ಕರಿಬೇವಿನ ಎಲೆ-5 ಎಸಳು.
ಮೊದಲಿಗೆ ಒಂದು ಪ್ಯಾನ್ ಗೆ ಜೀರಿಗೆ, ಮೆಂತೆ, ಒಣಮೆಣಸು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ತೆಂಗಿನತುರಿ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಇದನ್ನು ಸೇರಿಸಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಕಪ್ ಮೊಸರನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕದಡಿಕೊಳ್ಳಿ.
ಅದಕ್ಕೆ ರುಬ್ಬಿಕೊಂಡ ಈ ಮಿಶ್ರಣ ಹಾಕಿ ಚೆನ್ನಾಗಿ ತಿರುವಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಂತರ ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ ಸಾಸಿವೆ ಸಿಡಿದಾಗ ಅದನ್ನು ಮೊಸರಿನ ಮಿಶ್ರಣಕ್ಕೆ ಸೇರಿಸಿ.