ಹಬ್ಬ ಹರಿದಿನಗಳು ಬಂದಾಗ ಏನಾದರೂ ಸಿಹಿ ಮಾಡುತ್ತೇವೆ. ಆವಾಗ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಪಾಯಸವಂತೂ ಮಾಡಿಯೇ ಮಾಡುತ್ತೇವೆ. ಹಾಗಾಗಿ ಇಲ್ಲೊಂದು ರುಚಿಕರವಾದ ಹಾಗೂ ಸುಲಭವಾಗಿ ಮಾಡುವಂತಹ ಬಾದಾಮಿ ಪಾಯಸ ಮಾಡುವ ವಿಧಾನ ಇದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: 25 ಬಾದಾಮಿ ಅರ್ಧ ಗಂಟೆ ಬಿಸಿ ನೀರಿನಲ್ಲಿ ನೆನೆಸಿ ಸಿಪ್ಪೆ ಸುಲಿದು ಇಟ್ಟುಕೊಂಡಿರಿ. 1 ಕಪ್ ಸಕ್ಕರೆ, ಹಾಲು-1/2 ಲೀಟರ್, ¼ ಕಪ್ ಶ್ಯಾವಿಗೆ, ಬಾದಾಮಿ ಪುಡಿ-2 ಟೇಬಲ್ ಸ್ಪೂನ್, ¼ ಟೀ ಸ್ಪೂನ್ ಏಲಕ್ಕಿ ಪುಡಿ, ತುಪ್ಪ-2 ಟೇಬಲ್ ಸ್ಪೂನ್, ಪಿಸ್ತಾ, ಬಾದಾಮಿ ಚೂರುಗಳು-2 ಟೇಬಲ್ ಸ್ಪೂನ್.
ಮಾಡುವ ವಿಧಾನ: ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಶ್ಯಾವಿಗೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ನಂತರ ಇದಕ್ಕೆ 1 ½ ಕಪ್ ನೀರು ಹಾಕಿ 5 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ಸುಲಿದ ಬಾದಾಮಿಗೆ ಸ್ವಲ್ಪ ನೀರು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ನಂತರ ರುಬ್ಬಿದ ಮಿಶ್ರಣವನ್ನು ಶ್ಯಾವಿಗೆ ಮಿಶ್ರಣಕ್ಕೆ ಹಾಕಿ. ನಂತರ ಹಾಲು, ಸಕ್ಕರೆಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ನಂತರ ಇದಕ್ಕೆ ಬಾದಾಮಿ ಪುಡಿ ಕತ್ತರಿಸಿಟ್ಟುಕೊಂಡ ಪಿಸ್ತಾ, ಬಾದಾಮಿಯನ್ನು ಸೇರಿಸಿ 3 ನಿಮಿಷ ಕುದಿಸಿಕೊಂಡರೆ ರುಚಿಕರವಾದ ಬಾದಾಮಿ ಪಾಯಸ ರೆಡಿ.