ಉಪ್ಪಿನಕಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಊಟದ ಜತೆ ಚೂರು ಉಪ್ಪಿನಕಾಯಿ ಇದ್ದರೆ ಸಾಕು. ಸಾಂಬಾರು ರುಚಿ ಇಲ್ಲದಿದ್ದರೂ ಅನ್ನ ಹೊಟ್ಟೆಗೆ ಇಳಿಯುತ್ತದೆ. ಇಲ್ಲಿ ಸುಲಭವಾಗಿ ಮಾಡುವ ಟೊಮೆಟೊ ಉಪ್ಪಿನಕಾಯಿ ಇದೆ. ನೋಡಿ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಟೊಮೆಟೊ – 1 ಕೆಜಿ, ಹುಣಸೆಹಣ್ಣು – ಒಂದು ಸಣ್ಣ ಪೀಸ್, ಬೆಳ್ಳುಳ್ಳಿ – 10 ಎಸಳು, ಸಾಸಿವೆ ಎಣ್ಣೆ – 1/2 ಕಪ್, ಅರಿಶಿನ ಪುಡಿ – 1 ಟೀ ಸ್ಪೂನ್, ಖಾರದ ಪುಡಿ – 5 ಟೀ ಸ್ಪೂನ್, ಸಾಸಿವೆ – 1 ಟೇಬಲ್ ಸ್ಪೂನ್, ಮೆಂತೆಕಾಳು – 1/2 ಟೇಬಲ್ ಸ್ಪೂನ್, ಇಂಗು – 1/2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಟೊಮೆಟೊವನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಒಂದು ದಪ್ಪ ತಳದ ಬಾಣಲೆಗೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಕತ್ತರಿಸಿಟ್ಟುಕೊಂಡ ಟೊಮೆಟೊ ಹಾಕಿ ಹಾಗೇ ಅರಿಸಿನ ಕೂಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಮುಚ್ಚಳ ಮುಚ್ಚಿ ಟೊಮೆಟೊ ಬೇಯುವವರಗೆ ಬೇಯಿಸಿಕೊಳ್ಳಿ. ಟೊಮೆಟೊ ಬೆಂದು ಬರುವಾಗ ಹುಣಸೆಹಣ್ಣು ಕೂಡ ಸೇರಿಸಿಕೊಳ್ಳಿ. ಟೊಮೆಟೊದಲ್ಲಿನ ನೀರಿನ ಪಸೆ ಎಲ್ಲಾ ಆರಿದ ಮೇಲೆ ಗ್ಯಾಸ್ ಆಫ್ ಮಾಡಿ ಮಿಶ್ರಣ ತಣ್ಣಗಾಗಲು ಬಿಟ್ಟುಬಿಡಿ.
ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ½ ಟೇಬಲ್ ಸ್ಪೂನ್ ಸಾಸಿವೆ, ½ ಟೇಬಲ್ ಸ್ಪೂನ್ ಮೆಂತೆಕಾಳು ಹಾಕಿ ಪರಿಮಳ ಬರುವವರೆಗೆ ಹುರಿದುಕೊಂಡು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿಮಾಡಿಕೊಳ್ಳಿ.
ನಂತರ ಅದೇ ಪ್ಯಾನ್ ಗೆ ¼ ಕಪ್ ಎಣ್ಣೆ ಹಾಕಿ 1 ಟೀ ಸ್ಪೂನ್ ಸಾಸಿವೆ ಹಾಕಿ ಅದು ಸಿಡಿದಾಗ ಬೆಳ್ಳುಳ್ಳಿ ಎಸಳು ಹಾಕಿ 30 ಸೆಕೆಂಡುಗಳ ಕಾಲ ಫ್ರೈ ಮಾಡಿ ನಂತರ ಇದಕ್ಕೆ ಖಾರದ ಪುಡಿ, ಇಂಗು ಹಾಕಿ ಮಿಕ್ಸ್ ಮಾಡಿ ಇದಕ್ಕೆ ರುಬ್ಬಿಕೊಂಡ ಟೊಮೆಟೊ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ ಅಗತ್ಯವಿರುವಷ್ಟು ಉಪ್ಪು ಹಾಕಿ. 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದು ಎಣ್ಣೆ ಬಿಡುತ್ತಿದ್ದಂತೆ ಮಾಡಿಟ್ಟುಕೊಂಡ ಮೆಂತೆ ಹಾಗೂ ಸಾಸಿವೆ ಪುಡಿ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.ಇದು ತಣ್ಣಗಾದ ಮೇಲೆ ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ.