ಒಣಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆರಸ ಅಥವಾ ತಿಳಿಮಜ್ಜಿಗೆ ನೀರು ಬೆರೆಸಿ ಲೇಪನ ಮಾಡಿಕೊಳ್ಳಬೇಕು. ಈ ಲೇಪನವನ್ನು ಮುಖ – ಕೈ ಕಾಲುಗಳಿಗೆ ಲೇಪಿಸಿಕೊಂಡು, ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರನ್ನು ಬಳಸಿ ತೊಳೆದುಕೊಳ್ಳಬೇಕು.
ಲೋಳೆಸರ
ಯಾವ ಬಗೆಯ ಚರ್ಮವಾದರೂ ಪರವಾಗಿಲ್ಲ, ಧಾರಾಳವಾಗಿ ಇದನ್ನು ಬಳಸಬಹುದು. ಬಟ್ಟಲೊಂದಕ್ಕೆ ಲೋಳೆ ಸರದ ತಿರುಳನ್ನು ತೆಗೆದುಕೊಂಡು, ನಿಂಬೆ ರಸ ಹಾಗೂ ಅರಿಶಿಣವನ್ನು ಬೆರೆಸಿ. ನಂತರ ಮಿಶ್ರಣವನ್ನು ಮುಖಕ್ಕೆ, ಮೊಣಕೈ ತುದಿಗಳಿಗೆ ಲೇಪಿಸಿ, ಹದಿನೈದು ನಿಮಿಷಗಳ ನಂತರ ತೊಳೆದುಕೊಳ್ಳಿ.
ಆಲೂಗಡ್ಡೆ
ಇದು ಚರ್ಮವನ್ನು ಸ್ವಚ್ಛಗೊಳಿಸಿ ಕೋಮಲಾಂಶ ನೀಡುತ್ತದೆ. ಆಲೂಗಡ್ಡೆಯನ್ನು ತುರಿದುಕೊಂಡು, ಆ ತುರಿಯನ್ನು ಮುಖಕ್ಕೆ ಉಜ್ಜಿಕೊಳ್ಳಬೇಕು. ನಂತರ ಐಸ್ ಕ್ಯೂಬ್ ಅನ್ನು ಮುಖದ ತುಂಬಾ ಆಡಿಸಿಕೊಂಡರೆ ನುಣುಪು ನಿಮ್ಮ ಅನುಭವಕ್ಕೆ ಬರುತ್ತದೆ.
ಪಪ್ಪಾಯ
ಅತಿ ಹಣ್ಣಾಗಿ ಕಳೆತ ಪಪ್ಪಾಯದ ತಿರುಳನ್ನು ಅಂಗೈಯಲ್ಲಿ ಹಿಸುಕಿಕೊಳ್ಳಿ. ಒಣಚರ್ಮವಾದರೆ ಕೆನೆ, ಎಣ್ಣೆ ಚರ್ಮವಾದರೆ ನಿಂಬೆರಸ ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಲೇಪನವನ್ನು ಮುಖ, ಕತ್ತು, ಕೈಗಳಿಗೆ ಲೇಪಿಸಿಕೊಳ್ಳಿ. ಕಾಲು ಗಂಟೆಯ ನಂತರ ಚರ್ಮ ಬಿಗಿದುಕೊಂಡಂತೆ ಎನಿಸತೊಡಗುತ್ತದೆ. ಆಗ ಉಗುರು ಬೆಚ್ಚನೆಯ ನೀರಿನಿಂದ ಇದನ್ನು ತೊಳೆದುಕೊಳ್ಳಿ.
ಕೊಬ್ಬರಿ ಎಣ್ಣೆ
ಸ್ನಾನದ ಮೊದಲು ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಉಗುರು ಬಿಸಿ ನೀರಿನಿಂದ ಸ್ನಾನ ಮಾಡಿದರೆ ನೈಸರ್ಗಿಕ ಮಾಯಿಶ್ಚರೈಸರ್ ನೀಡಿದಂತೆ ಆಗುತ್ತದೆ. ಸ್ನಾನಕ್ಕೆ ಮೊದಲು ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಲು ಆಗದಿದ್ದರೆ ಸ್ನಾನದ ಕೊನೆಯಲ್ಲಿ ಒಂದು ಲೋಟ ನೀರಿಗೆ ಒಂದಷ್ಟು ತೆಂಗಿನೆಣ್ಣೆಯ ಹನಿಗಳನ್ನು ಸೇರ್ಪಡೆಗೊಳಿಸಿ. ಅವನ್ನು ಕೈ, ಕಾಲು, ಬೆನ್ನು, ಹೊಟ್ಟೆಗೆ ಹಚ್ಚಿಕೊಂಡರೆ ತುರಿಕೆ ಹಾಗೂ ಕೆರೆತವನ್ನು ಕಡಿಮೆ ಮಾಡಬಹುದು.