ಜೈಲಾಧಿಕಾರಿಗಳ ಕೈಯಲ್ಲಿ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೈದಿಯೊಬ್ಬ ಮೊಬೈಲ್ನ್ನೇ ನುಂಗಿದ ವಿಲಕ್ಷಣ ಘಟನೆಯೊಂದು ದೆಹಲಿಯ ತಿಹಾರ್ ಜೈಲಿನಲ್ಲಿ ವರದಿಯಾಗಿದೆ.
ಜೈಲಾಧಿಕಾರಿಗಳಿಗೆ ತನ್ನ ಬಳಿ ಮೊಬೈಲ್ ಇದೆ ಎಂದು ತಿಳಿದರೆ ಶಿಕ್ಷೆ ನೀಡುತ್ತಾರೆ ಎಂಬ ಭಯದಲ್ಲಿ ಈ ರೀತಿ ಮಾಡಿದ ಕೈದಿಗೆ ಎಂಡೋಸ್ಕೋಪಿ ಮೂಲಕ ಮೊಬೈಲ್ನ್ನು ಹೊರತೆಗೆಯಲಾಗಿದೆ. 7 ಸೆಂಟಿಮೀಟರ್ ಉದ್ದ ಹಾಗೂ 3 ಸೆಂಟಿ ಮೀಟರ್ ಅಗಲದ ಮೊಬೈಲ್ನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರತೆಗೆದಿದ್ದಾರೆ.
ಕೈದಿಯ ಹೊಟ್ಟೆಯ ಎಕ್ಸ್ ರೇ ವರದಿ ನೋಡಿದ ಬಳಿಕ ಆತನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಇರಬಹುದು ಎಂದು ಶಂಕಿಸಿದ್ದೆವು. ಬಾಯಿಯ ಮೂಲಕ ಎಂಡೊಸ್ಕೋಪಿ ಮಾಡಿ ಮೊಬೈಲ್ನ್ನು ಹೊರತೆಗೆದಿದ್ದೇವೆ ಎಂದು ದೆಹಲಿಯ ಜಿಬಿ ಪಂತ್ ಆಸ್ಪತ್ರೆಯ ವೈದ್ಯರ ಡಾ. ಸಿದ್ಧಾರ್ಥ್ ಹೇಳಿದರು.
ಜಿಬಿ ಪಂತ್ ಆಸ್ಪತ್ರೆಯ ವೈದ್ಯ ಸಿದ್ಧಾರ್ಥ್ ಮತ್ತು ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಡಾ ಮನೀಷ್ ತೋಮರ್ ನೇತೃತ್ವದ ತಂಡವು ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದೆ. ಮೊಬೈಲ್ ಫೋನ್ ನುಂಗುವುದು ಅಂದರೆ ಸುಲಭದ ಮಾತಲ್ಲ. ಈ ರೀತಿ ಮೊಬೈಲ್ ಫೋನ್ ನುಂಗಲು ಅಭ್ಯಾಸ ಇರುವವರಿಗೆ ಮಾತ್ರ ಇದು ಸಾಧ್ಯ ಎಂದು ಡಾ. ಸಿದ್ಧಾರ್ಥ್ ಹೇಳಿದರು.
ಡಾ ಸಿದ್ಧಾರ್ಥ್ ಪ್ರಕಾರ, ಮೊಬೈಲ್ ಫೋನ್ ನುಂಗಲು ಕಷ್ಟ. ಮತ್ತು ಅದನ್ನು ಅಭ್ಯಾಸ ಇರುವವರು ಮಾತ್ರ ಹಾಗೆ ಮಾಡಬಹುದು.