alex Certify ತಮಗೆ ಸಚಿವ ಸ್ಥಾನ ನೀಡುವ ವಿಚಾರ ಹೈಕಮಾಂಡ್‌ ಗೆ ಬಿಟ್ಟ ವಿಷಯ: ಕೆ.ಎಸ್.‌ ಈಶ್ವರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಗೆ ಸಚಿವ ಸ್ಥಾನ ನೀಡುವ ವಿಚಾರ ಹೈಕಮಾಂಡ್‌ ಗೆ ಬಿಟ್ಟ ವಿಷಯ: ಕೆ.ಎಸ್.‌ ಈಶ್ವರಪ್ಪ

ಶಿವಮೊಗ್ಗ: ಸಚಿವ ಸ್ಥಾನ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಷಯ ಎಂದು ಈಶ್ವರಪ್ಪ ಹೇಳಿದ್ದಾರೆ. ಇಂದು ಮಹಾನಗರ ಪಾಲಿಕೆಯ ವಿರೋಧಪಕ್ಷದ ನಾಯಕಿಯಾಗಿ ಅಧಿಕಾರ ಸ್ವೀಕರಿಸಿದ ರೇಖಾ ರಂಗನಾಥ್ ಅವರಿಗೆ ಅಭಿನಂದಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನನಗೆ ಈಗಾಗಲೇ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ನಲ್ಲಿ ಕ್ಲೀನ್ ಚಿಟ್ ನೀಡಿದ್ದು, ನಾನು ಆರೋಪದಿಂದ ಮುಕ್ತನಾಗಿದ್ದೇನೆ. ಮುಂದಿನ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡಬೇಕೋ ಅಥವಾ ಬೇಡವೇ ಎಂಬುದರ ಬಗ್ಗೆ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಹಿರಿಯರಾದ ಬಿ.ಎಸ್. ಯಡಿಯೂರಪ್ಪ ತಮ್ಮ ಕ್ಷೇತ್ರವನ್ನು ಪುತ್ರ ವಿಜಯೇಂದ್ರರಿಗೆ ನೀಡುವ ಬಗ್ಗೆ ಘೋಷಿಸಿರುವುದು ರಾಜ್ಯದ ಮತ್ತು ಪಕ್ಷದ ಹಿತದೃಷ್ಠಿಯಿಂದ ತೆಗೆದುಕೊಂಡ ತೀರ್ಮಾನವಾಗಿದೆ. ಇದಕ್ಕೆ ಕೇಂದ್ರದ ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಕೇಂದ್ರ ನಾಯಕರು ಒಪ್ಪಿಗೆ ನೀಡುತ್ತಾರೆ ಎಂಬ ವಿಶ್ವಾಸದಿಂದ ಹೇಳಿಕೆ ನೀಡಿರಬಹುದು. ಈ ಬೆಳವಣಿಗೆ ಪಕ್ಷದಲ್ಲಿ ಯಾವುದೇ ಗೊಂದಲ ಹುಟ್ಟಿಸುವುದಿಲ್ಲ. ಒಂದು ಪಕ್ಷ ಇದು ಗೊಂದಲವಿದ್ದರೂ ಅದನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕಿದೆ ಎಂದರು.

ಆಡಳಿತ ಪಕ್ಷ ಗಟ್ಟಿಯಾದಂತೆ ವಿಪಕ್ಷವೂ ಸಹ ಗಟ್ಟಿಯಾದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಅನೇಕ ರಾಜ್ಯಗಳಲ್ಲಿ ವಿರೋಧ ಪಕ್ಷಗಳೇ ಇಲ್ಲದಂತಾಗಿದೆ. ದೇಶದಲ್ಲಿ ಕಾಂಗ್ರೆಸ್ ವಿಪಕ್ಷವಾಗಿ ದಿನೇ ದಿನೇ ನಶಿಸಿ ಹೋಗುತ್ತಿದೆ. ವಿರೋಧ ಪಕ್ಷ ಇಲ್ಲದಿರುವುದು ಪ್ರಜಾಪ್ರಭುತ್ವದ ಅಣಕು ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಪಕ್ಷದ ನೇತೃತ್ವ ಕೊರತೆಯೋ ಅಥವಾ ನಾಯಕರು, ಕಾರ್ಯಕರ್ತರಿಗೆ ಸಿದ್ಧಾಂತ ಹೇಳುವುದರಲ್ಲಿ ವಿಫಲರಾಗಿರಾದ್ದಾರೆಯೋ? ಇದರಿಂದಾಗಿ ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ ದಿನೇ ದಿನೇ ಕುಸಿದು ಹೋಗುತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಡಕು ಹಾಗೂ ಕಿತ್ತಾಟ ಹೆಚ್ಚಾಗುತ್ತಿದೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈಗಲೇ ಮೂರ್ನಾಲ್ಕು ಮುಖಂಡರು ನಾನೇ ಸಿಎಂ ಎಂದು ಹೇಳುತ್ತಿರುವುದು ನೋಡಿದರೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ವಿಪಕ್ಷವಾಗಿ ಇರುತ್ತದೆಯೋ ಇಲ್ಲವೋ ಎಂಬ ಅನುಮಾನವಿದೆ ಎಂದರು.

ಸಿದ್ಧರಾಮಯ್ಯ ಅವರಿಗೆ ಅಧಿಕಾರ ದಾಹವಿದೆ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಯಾಗುವ ಹಪಾಹಪಿ ಇದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆದ ನಂತರ ಒಕ್ಕಲಿಗ ಜನಾಂಗದವರು ಮುಖ್ಯಮಂತ್ರಿ ಆಯ್ಕೆಯಾಗಬೇಕೆಂದು ಡಿ.ಕೆ. ಶಿವಕುಮಾರ್ ನೇರವಾಗಿ ಜಾತಿಯ ಲೇಪ ಹಚ್ಚುತ್ತಿದ್ದಾರೆ. ಸಿದ್ಧರಾಮಯ್ಯ ಕುರುಬ ನಾಯಕನೆಂದು ಜಾತಿ ಲೇಪ ಹಚ್ಚುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಒಕ್ಕಲಿಗರ ಮಹಾಪುರುಷ ಕೆಂಪೇಗೌಡ ಹಾಗೂ ಕುರುಬರ ಮಹಾಪುರುಷ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಹೇಳಿಕೊಂಡು ಈ ನಾಯಕರು ಜಾತಿ, ಧರ್ಮಕ್ಕೂ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಕಾಂಗ್ರೆಸ್ ಪಕ್ಷ ಇಂದು ಸ್ವಾರ್ಥಿಗಳ ಕೂಟವಾಗಿದೆ. ನಾನು, ನನಗೇ ಅಧಿಕಾರ ಬೇಕೆಂಬ ಪೈಪೋಟಿಗೆ ಬಿದ್ದಿರುವುದರಿಂದ ಇಂದು ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿದೆ ಎಂದರು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಚುನಾವಣೆ ಸಂದರ್ಭದಲ್ಲಿ ಯಾರಿಗೆ ಬಿ ಫಾರಂ ನೀಡಿದ್ದರೂ ಆ ಅಭ್ಯರ್ಥಿ ಗೆಲುವು ನಿಶ್ಚಿತವಾಗಿತ್ತು. ಆದರೆ, ಇಂದು ಕಾಂಗ್ರೆಸ್ ಪಕ್ಷ ಬಿ ಫಾರಂ ನೋಡಿದರೆ ಓಡಿ ಹೋಗುವಂತಹ ಪರಿಸ್ಥಿತಿ ಬಂದಿದೆ ಎಂದ ಅವರು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಸಿದ್ಧರಾಮಯ್ಯ ಅವರು ತನಿಖಾ ವರದಿ ನೋಡದೇ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಟೀಕೆ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಗಾಂಜಾ ಹಾವಳಿ ನಿಯಂತ್ರಣಕ್ಕೆ ಬರದಿದ್ದಲ್ಲಿ ಸಿಎಂ ಜೊತೆ ಮಾತಾಡಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...