ದಂಪತಿಗಳು ಆಕಸ್ಮಿಕವಾಗಿ ತಪ್ಪಾದ ವಿಮಾನವನ್ನು ಹತ್ತಿದ ಪರಿಣಾಮ, ಅವರು ಸ್ಪೇನ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಎಲಿಸ್ ಮಲ್ಲಿಯಾ ಮತ್ತು ಜೆಸ್ಸಿ ಜೆಜೆಕ್ವೆಲ್ ಎಂಬ ದಂಪತಿ ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು ಕಳೆದು ವಾಪಸ್ ಮನೆಗೆ ಹೋಗುತ್ತಿದ್ದಾಗ ತಪ್ಪಾಗಿ 800 ಮೈಲುಗಳಷ್ಟು ದೂರ ಪ್ರಯಾಣಿಸಿದ್ದಾರೆ.
ಮಾರ್ಸಿಲ್ಲೆಯಲ್ಲಿ ವಿಮಾನವನ್ನು ಹತ್ತಿದ ನಂತರ, ಈ ಜೋಡಿಯು ಮ್ಯಾಡ್ರಿಡ್ – ಸ್ಟಾನ್‌ಸ್ಟೆಡ್‌ಗೆ ಹಾರುತ್ತಿದ್ದಾರೆಂದು ತಿಳಿದಿರಲಿಲ್ಲವಂತೆ. ಫ್ಲೈಟ್ ಅಟೆಂಡೆಂಟ್ ಸ್ಪ್ಯಾನಿಷ್ ಭಾಷೆಯಲ್ಲಿ ಸ್ವಾಗತ ಕೋರಿದಾಗ ದಂಪತಿ ಅಷ್ಟಾಗಿ ಅದಕ್ಕೆ ತಲೆಕೆಡಿಸಿಕೊಂಡಿಲ್ಲ. ನಂತರ ಎಲ್ಲಾ ಫ್ಲೈಟ್ ಅಟೆಂಡೆಂಟ್‌ಗಳು ಸ್ಪ್ಯಾನಿಷ್ ಮಾತನಾಡುತ್ತಿದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಈ ಬಗ್ಗೆ ಕೇಳಿದಾಗ ಮ್ಯಾಡ್ರಿಡ್‌ಗೆ ಹೋಗುತ್ತಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ಮೊದಲಿಗೆ ದಂಪತಿಗಳು ತಮ್ಮ ಬೋರ್ಡಿಂಗ್ ಪಾಸ್‌ಗಳು ತಪ್ಪಾಗಿರಬೇಕು ಎಂದು ಊಹಿಸಿದ್ದಾರೆ. ಆದರೆ, ಅವರು ಸರಿಯಾಗಿ ಪರಿಶೀಲಿಸಿದಾಗ ಅವುಗಳನ್ನು ಸ್ಪಷ್ಟವಾಗಿ ಸ್ಟಾನ್‌ಸ್ಟೆಡ್ ಎಂದು ನಮೂದಿಸಲಾಗಿತ್ತು. ಆದರೂ ಇದು ಹೇಗೆ ಸಂಭವಿಸಿತು ಎಂಬುದು ದಂಪತಿ ಹಾಗೂ ವಿಮಾನದ ಸಿಬ್ಬಂದಿಗೂ ಅಚ್ಚರಿಗೊಳಿಸಿದೆ.