ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ಜೊತೆಗೆ ರಾಯತ ಸೇವಿಸಲು ಇಷ್ಟಪಡ್ತಾರೆ. ಅದರಲ್ಲೂ ಬೇಸಿಗೆಯಲ್ಲಿ ರಾಯತ ಆರೋಗ್ಯಕ್ಕೂ ಹಿತವಾಗಿರುತ್ತದೆ. ಪರೋಟ, ಅನ್ನ, ಬೇಳೆ ಸಾರು ಇವೆಲ್ಲದರ ಜೊತೆಗೂ ರಾಯತ ಒಳ್ಳೆ ಕಾಂಬಿನೇಶನ್.
ಸೌತೆಕಾಯಿ ರಾಯತ ಸೇರಿದಂತೆ ಹಲವು ವೆರೈಟಿಗಳನ್ನು ನೀವು ಟ್ರೈ ಮಾಡಿರಬಹುದು. ನಾವು ನಿಮಗೆ ಇವತ್ತು ಪರಿಚಯಿಸ್ತಾ ಇರೋದು ಮಾವಿನ ಹಣ್ಣಿನ ರಾಯತ. ತಿನ್ನಲು ಬಹಳ ರುಚಿಕರವಾಗಿರೋ ಈ ರಾಯತವನ್ನು ಮಾಡೋದು ಕೂಡ ಸುಲಭ. ಆರೋಗ್ಯಕ್ಕೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ.
ಬೇಕಾಗುವ ಸಾಮಾಗ್ರಿಗಳು: ಚೆನ್ನಾಗಿ ಮಾಗಿದ ಮಾವಿನ ಹಣ್ಣು, 2 ಕಪ್ ಮೊಸರು, ಉಪ್ಪು, ಚಿಟಿಕೆ ಕಾಳು ಮೆಣಸಿನ ಪುಡಿ, ಒಂದು ಚಮಚ ಜೀರಿಗೆ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಸ್ವಲ್ಪ ಚಾಟ್ ಮಸಾಲಾ, ಸ್ವಲ್ಪ ಸೆಲರಿ, ಅರ್ಧ ಚಮಚ ಸಕ್ಕರೆ.
ರಾಯತ ಮಾಡುವ ವಿಧಾನ: ಮೊದಲು ಮಿಕ್ಸರ್ ಜಾರಿಗೆ ಮೊಸರು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಮಾವಿನ ಹಣ್ಣಿನ ತಿರುಳನ್ನು ಹಾಕಿ ತಿರುಗಿಸಿ. ಈ ಮಿಶ್ರಣವನ್ನ ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದ್ಕಕೆ ಉಪ್ಪು, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲಾ, ಸೆಲರಿ ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಊಟದ ಜೊತೆಗೆ ಸವಿಯಲು ಈ ರಾಯತ ಬಹಳ ಚೆನ್ನಾಗಿರುತ್ತದೆ. ಈ ರಾಯತವನ್ನು ಇನ್ನಷ್ಟು ರುಚಿಕರವಾಗಿ ಮಾಡಲು ಬಯಸಿದರೆ ಅದಕ್ಕೆ ಪುದೀನಾವನ್ನು ಕೂಡ ಸೇರಿಸಬಹುದು. ಪರೋಟಾ ಜೊತೆಗೂ ಈ ರಾಯತ ಒಳ್ಳೆ ಕಾಂಬಿನೇಶನ್. ಅನ್ನದ ಜೊತೆಗೂ ನೀವು ಸವಿಯಬಹುದು.