
ಪ್ರೊಟೀನ್ ದೇಹಕ್ಕೆ ಅತ್ಯಗತ್ಯವಾದ ಅಂಶ. ಅದರಲ್ಲೂ ನೀವು ವರ್ಕ್ಔಟ್ ಮಾಡುವವರಾಗಿದ್ರೆ ಪ್ರೊಟೀನ್ ಬೇಕೇಬೇಕು. ಇನ್ನೂ ನೀವು ವೀಗನ್ ಆಗಿದ್ರಂತೂ ನಿಮ್ಮ ದೇಹಕ್ಕೆ ಪ್ರೊಟೀನ್ ಪೂರೈಕೆ ಬಗ್ಗೆ ಗಮನ ಹರಿಸಲೇಬೇಕು. ಈ ನಿಟ್ಟಿನಲ್ಲಿ ಸೋಯಾ ಚಂಕ್ಸ್ ಅತ್ಯುತ್ತಮ ಆಯ್ಕೆ. ಸೋಯಾ ಚಂಕ್ಸ್ ಬಳಸಿ ತಯಾರಿಸಬಹುದಾದ ಹೈ ಪ್ರೊಟೀನ್ ಸೋಯಾ ದೋಸೆ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.
ಮೊದಲಿಗೆ ಒಂದು ಕಡಾಯಿಯಲ್ಲಿ ಒಂದು ಕಪ್ ಸೋಯಾ ಚಂಕ್ಸ್, ಒಂದು ಟೊಮ್ಯಾಟೊ, 2 ಒಣಮೆಣಸಿನಕಾಯಿ, ಅರ್ಧ ಇಂಚು ಶುಂಠಿ, ಅರ್ಧ ಚಮಚ ಉಪ್ಪು ಮತ್ತು ನೀರು ಹಾಕಿ 10 ನಿಮಿಷ ಕುದಿಸಿಕೊಳ್ಳಬೇಕು.
ಬಳಿಕ ನೀರನ್ನು ಬಸಿದುಕೊಂಡು, ಸೋಯಾ ತಣ್ಣಗಾಗುವ ತನಕ ಕಾದು, ಟೊಮ್ಯಾಟೊ ಸಿಪ್ಪೆ ತೆಗೆದು, ಈ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
ಇದಕ್ಕೆ 1 ಕಪ್ ಗೋಧೀ ಹಿಟ್ಟು, ಅಕ್ಕಿ ಹಿಟ್ಟು ಮುಕ್ಕಾಲು ಕಪ್, ಅರ್ಧ ಕಪ್ ಗಟ್ಟಿ ಮೊಸರು, ಒಂದು ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ಈ ಮಿಶ್ರಣಕ್ಕೆ ಸಣ್ಣದಾಗಿ ಹೆಚ್ಚಿಟ್ಟುಕೊಂಡ ಈರುಳ್ಳಿ ಅರ್ಧ ಕಪ್, ಕ್ಯಾರೆಟ್ ತುರಿ ಒಂದು ಕಪ್, ಸಣ್ಣದಾಗಿ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು 2 ಸ್ಪೂನ್ನಷ್ಟು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು.
ಬಳಿಕ ನಾನ್ ಸ್ಟಿಕ್ ತವಾ ಬಿಸಿ ಮಾಡಿ, ತುಪ್ಪ ಇಲ್ಲವೇ ಎಣ್ಣೆ ಹಚ್ಚಿ ದಪ್ಪದಾಗಿ ದೋಸೆ ಹಾಕಬೇಕು. ಎರಡು ಬದಿ ಚೆನ್ನಾಗಿ ಬೇಯಿಸಬೇಕು.
ಇಷ್ಟಾದ್ರೆ ಹೈ ಪ್ರೊಟೀನ್ ಸೋಯಾ ದೋಸೆ ಸವಿಯಲು ಸಿದ್ಧ. ಕಾಯಿ ಚಟ್ನಿ ಇಲ್ಲವೇ ಕೆಂಪು ಚಟ್ನಿಯೊಡನೆ ದೋಸೆ ಸಖತ್ ಟೇಸ್ಟೀಯಾಗಿರುತ್ತದೆ.