ಟ್ರಾಫಿಕ್ ಸಿಗ್ನಲ್ ಬ್ಯಾಟರಿಗಳನ್ನು ಕದ್ದ ದಂಪತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಬ್ಯಾಟರಿಗಳನ್ನು ಕದಿಯುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅಶೋಕ್ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಇತ್ತೀಚಿಗೆ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ದಂಪತಿ ಸ್ಕೂಟರ್ನಲ್ಲಿ ಮುಂಜಾನೆ 3 ರಿಂದ 5 ಗಂಟೆಯ ನಡುವೆ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ.
ಸಿಸಿ ಕ್ಯಾಮರಾದಲ್ಲಿ ತಮ್ಮ ಸ್ಕೂಟರ್ನ ಸಂಖ್ಯೆಯು ಸೆರೆಹಿಡಿಯಬಾರದೆಂದು ದಂಪತಿ ಟೈಲ್ ಲೈಟ್ಗಳನ್ನು ನಿಷ್ಕ್ರಿಯಗೊಳಿಸಿದ್ದರು. ಬಳಿಕ ಟ್ರಾಫಿಕ್ ಲೈಟ್ ಬ್ಯಾಟರಿಗಳನ್ನು ಕದ್ದಿದ್ದಾರೆ.
ಈ ದಂಪತಿಯು ಕಳೆದ ವರ್ಷ ಜೂನ್ ತಿಂಗಳಿನಿಂದ ಟ್ರಾಫಿಕ್ ಸಿಗ್ನಲ್ಗಳ ಬ್ಯಾಟರಿಗಳನ್ನು ಕದಿಯಲು ಯತ್ನಿಸಿದರು. ದಂಪತಿ ಈ ಬ್ಯಾಟರಿಗಳನ್ನು ಗುಜರಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿ ಸಿಕಂದರ್ ಟೀ ಮಾರುವವನು ಹಾಗೂ ನಜ್ಮಾ ಗಾರ್ಮೆಂಟ್ಸ್ ಕೆಲಸಗಾರರಾಗಿದ್ದಾರೆ. ಸಿಕಂದರ್ ಈ ಹಿಂದೆ 2017 ಹಾಗೂ 2018ರಲ್ಲಿ ಉಪ್ಪಾರಪೇಟೆ ಹಾಗೂ ಜೆ.ಜೆ ನಗರ ಪೊಲೀಸ್ ಠಾಣೆಗಳಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದಕ್ಕಾಗಿ ಬಂಧಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.