ನವದೆಹಲಿ : ದೇಶದಲ್ಲಿ ಮೊದಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು, ಜನ ಬದುಕು ಸಾಗಿಸಲು ಹೈರಾಣಾಗುತ್ತಿದ್ದಾರೆ. ಇದರ ನಡುವೆ ಸುರಿದ ಅಕಾಲಿಕ ಮಳೆ ಕೂಡ ಜನರ ನೆಮ್ಮದಿಯ ಬದುಕಿಗೆ ಭಂಗ ತಂದಿರುವುದಂತೂ ಅಷ್ಟೇ ಸತ್ಯ.
ದಕ್ಷಿಣ ಭಾರತದಲ್ಲಿನ ರಾಜ್ಯಗಳಲ್ಲಿ ಸದ್ಯ ಟೊಮೆಟೋ ದರ ಆಕಾಶ ತಲುಪಿದೆ. ಹಲವು ರಾಜ್ಯಗಳಲ್ಲಿ ಟೊಮೆಟೋ ದರ ಕೆಜಿಗೆ ರೂ. 140ರಷ್ಟಿದೆ. ಕಳೆದ ಎರಡ್ಮೂರು ತಿಂಗಳಿನಿಂದಲೂ ಟೊಮೆಟೋ ದರದಲ್ಲಿ ಭಾರೀ ಏರಿಕೆಯಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೋ ನೋಡಿದರೆ ಸಾಕು ಬೆವರು ನಿಂತಲ್ಲಿಂದಲೇ ಇಳಿಯುತ್ತಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಟೊಮೆಟೋ ಖರೀದಿಸುವವನೇ ಶ್ರೀಮಂತ ವ್ಯಕ್ತಿ ಎನ್ನುವಂತಾಗಿ ಬಿಟ್ಟಿದೆ.
ಅಕಾಲಿಕ ಮಳೆಯಿಂದಾಗಿ ಟೊಮೆಟೋ ದರ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ, ಉತ್ತರ ಭಾರತದಲ್ಲಿ ಮಾತ್ರ ಟೊಮೆಟೋ ದರ ಇಷ್ಟಿಲ್ಲ. ಅಲ್ಲಿ ಕೆಜಿ ಟೊಮೆಟೋ ದರ ರೂ. 30 ರಿಂದ 80ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.
ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ATM ನಗದು ಹಿಂಪಡೆಯುವಿಕೆ ದುಬಾರಿ, ಜ. 1 ರಿಂದಲೇ ಜಾರಿ -21 ರೂ. + ತೆರಿಗೆ
ಸದ್ಯದ ಮಾರುಕಟ್ಟೆಯ ಮಾಹಿತಿಯಂತೆ ಕೇರಳದಲ್ಲಿ ಟೊಮೆಟೋ ದರ ಕೆಜಿಗೆ ರೂ. 120 ರಿಂದ 130ರ ಆಸುಪಾಸಿನಲ್ಲಿದೆ. ಅಂಡಮಾನ್ ನಿಕೋಬಾರ್ ನಲ್ಲಿ ಕೂಡ ನೂರರ ಗಡಿ ದಾಟಿ ಟೊಮೆಟೋ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಕೂಡ ಟೊಮೆಟೋ ನೂರರ ಗಡಿ ದಾಟಿದೆ. ರಾಜ್ಯದಲ್ಲಿನ ಹಲವು ನಗರಗಳಲ್ಲಿ ಕೂಡ ಟೊಮೆಟೋ ನೂರರ ಗಡಿ ದಾಟಿ ಮಾರಾಟವಾಗುತ್ತಿದೆ.