ಮೊಬೈಲ್ ಫೋನ್ ಟವರ್ ಸ್ಥಾಪಿಸುತ್ತೇನೆ ಎಂದು ಭರವಸೆ ನೀಡಿ ಬಳಿಕ ತಮ್ಮ ಆಶ್ವಾಸನೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಓಡಿಶಾದ ಕಾಳಹಂಡಿ ಜಿಲ್ಲೆಯ ಬಂಧಪರಿ ಪಂಚಾಯ್ ನಿವಾಸಿಗಳು ಬಿದಿರಿನಿಂದ ಸಾಂಕೇತಿಕವಾಗಿ ಟವರ್ ನಿರ್ಮಾಣ ಮಾಡಿ ಇದರ ಉದ್ಘಾಟನೆಗೆ ಶಾಸಕರಿಗೆ ಆಹ್ವಾನ ನೀಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬಂಧಪರಿ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಮೊಬೈಲ್ ಟವರ್ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ಜನತೆಯ ಕನಸಾಗಿತ್ತು. ಹೀಗಾಗಿ ನಮ್ಮ ಗ್ರಾಮಕ್ಕೆ ಬಿಎಸ್ಎನ್ಎಲ್ ಟವರ್ ನಿರ್ಮಾಣ ಮಾಡಿಕೊಡಿ ಎಂದು ಲಾಂಜಿಗಢ ಶಾಸಕ ಪ್ರದೀಪ್ ಕುಮಾರ್ ಬಳಿ ಮನವಿ ಮಾಡಿದ್ದರು. ಸಾಕಷ್ಟು ಬಾರಿ ಮನವಿ ಮಾಡಿದರೂ ಸಹ ಶಾಸಕ ಪ್ರದೀಪ್ ಕುಮಾರ್ ಗ್ರಾಮಸ್ಥರ ಮನವಿಗೆ ಸ್ಪಂದನೆ ನೀಡಿರಲಿಲ್ಲ.
ಮೊನ್ನೆ ಶಾಸಕ ಪ್ರದೀಪ್ ಕುಮಾರ್ ತಮ್ಮ ಪಂಚಾಯತ್ಗೆ ಭೇಟಿ ನೀಡಲಿದ್ದಾರೆ ಎಂಬ ವಿಚಾರವನ್ನು ಅರಿತ ಗ್ರಾಮಸ್ಥರು ತಾವೇ ಬಿದಿರಿನ ಕಡ್ಡಿಯನ್ನು ಬಳಸಿ ಸಾಂಕೇತಿಕವಾಗಿ ಮೊಬೈಲ್ ಟವರ್ ನಿರ್ಮಾಣ ಮಾಡಿದ್ದಾರೆ. ಟವರ್ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸುತ್ತಿದ್ದಾರೆ ಎಂದು ಗ್ರಾಮದ ತುಂಬೆಲ್ಲ ಬ್ಯಾನರ್ ಅಂಟಿಸಿದ್ದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಗ್ರಾಮಸ್ಥರೊಬ್ಬರು, ನಮ್ಮ ಗ್ರಾಮಕ್ಕೊಂದು ಮೊಬೈಲ್ ಟವರ್ ನಿರ್ಮಿಸಿಕೊಡಿ ಎಂದು ಸಾಕಷ್ಟು ಬಾರಿ ಶಾಸಕರ ಬಳಿ ಮನವಿ ಮಾಡಿದ್ದೆವು. ಆದರೆ ಅವರು ಈ ಬೇಡಿಕೆಯನ್ನು ಈಡೇರಿಸಿಲ್ಲ. ಹೀಗಾಗಿ ಅವರು ನಮ್ಮ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಬಿದಿರಿನಿಂದ ಸಾಂಕೇತಿಕವಾಗಿ ಟವರ್ ನಿರ್ಮಾಣ ಮಾಡಿದ್ದೇವೆ. ನಮ್ಮ ಗ್ರಾಮಕ್ಕೆ ಟವರ್ ನಿರ್ಮಾಣ ಆಗುವವರೆಗೂ ನಾವು ಯಾವುದೇ ಶಾಸಕರು ಹಾಗೂ ಸಚಿವರು ಗ್ರಾಮಕ್ಕೆ ಪ್ರವೇಶ ನೀಡಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.