alex Certify ಜಪಾನಿನ ಮಕ್ಕಳೊಂದಿಗೆ ಪ್ರಧಾನಿ ಮೋದಿ ಹಿಂದಿಯಲ್ಲಿ ಸಂವಾದ; ವಿಡಿಯೋ ಫುಲ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಪಾನಿನ ಮಕ್ಕಳೊಂದಿಗೆ ಪ್ರಧಾನಿ ಮೋದಿ ಹಿಂದಿಯಲ್ಲಿ ಸಂವಾದ; ವಿಡಿಯೋ ಫುಲ್ ವೈರಲ್

ಟೋಕಿಯೋ: ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳು ಸೇರಿದಂತೆ ಅನಿವಾಸಿ ಭಾರತೀಯರು ಮತ್ತು ಜಪಾನ್ ನಾಗರಿಕರೊಂದಿಗೆ ಸಂವಾದ ನಡೆಸಿದರು. ಅವರ ಸಂವಾದದ ವಿಡಿಯೊ ಈಗ ವೈರಲ್‌ ಆಗಿದೆ.

ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಎರಡು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಟೋಕಿಯೊದ ಹೋಟೆಲ್‌ನಲ್ಲಿ ಅನಿವಾಸಿ ಭಾರತೀಯರು ಮತ್ತು ಜಪಾನ್ ನಾಗರಿಕರು ಸ್ವಾಗತಿಸಿದರು.

ಮಕ್ಕಳೊಂದಿಗೆ ಹಿಂದಿ ಭಾಷೆಯಲ್ಲಿ ಪ್ರಧಾನಿ ಮೋದಿ ನಡೆಸಿದ ಸಂವಾದ ವಿಡಿಯೋ ಗಮನಸೆಳೆದಿದೆ. ಮಕ್ಕಳೊಂದಿಗೆ ಪ್ರಧಾನಿ ಮೋದಿಯವರ ಸಂವಾದದ ವಿಡಿಯೊ ವ್ಯಾಪಕವಾಗಿ ಶೇರ್‌ ಆಗುತ್ತಿದೆ. ಜಪಾನಿನ ಮಕ್ಕಳು ಕೂಡ ಪ್ರಧಾನಿ ಮೋದಿಯವರೊಂದಿಗೆ ಹಿಂದಿಯಲ್ಲಿ ಮಾತನಾಡಿದರು. ಇದರಿಂದ ಪ್ರಭಾವಿತರಾದ ಪ್ರಧಾನಿ ಮೋದಿಯವರು, “ವಾಹ್ ! ನೀವು ಹಿಂದಿಯನ್ನು ಎಲ್ಲಿಂದ ಕಲಿತಿದ್ದೀರಿ ? ನೀವು ಅದನ್ನು ಚೆನ್ನಾಗಿ ಮಾತನಾಡುತ್ತೀರಿ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದು ವಿಡಿಯೋದಲ್ಲಿ ಕಂಡುಬಂದಿದೆ.

ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಿದ ಮಕ್ಕಳು ಅವರ ಹಸ್ತಾಕ್ಷರವನ್ನು ಸ್ವೀಕರಿಸಲು ಉತ್ಸುಕರಾಗಿದ್ದದು ಕೂಡ ಕಂಡುಬಂತು. ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಅನಿವಾಸಿ ಭಾರತೀಯರು “ಭಾರತ್ ಮಾ ಕಾ ಶೇರ್” (ಭಾರತದ ಸಿಂಹ) ಘೋಷಣೆಗಳ ಕೂಗಿ ಹರ್ಷೋದ್ಘಾರ ಮಾಡಿದರು.

ಎರಡು ದಿನಗಳ ಪ್ರವಾಸದ ಭಾಗವಾಗಿ ಇಂದಿನಿಂದ ಪ್ರಾರಂಭವಾಗುವ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ನ ಟೋಕಿಯೊ ತಲುಪಿದ್ದಾರೆ. ಪ್ರಧಾನಿ ಮೋದಿಯವರು ಎರಡನೇ ಬಾರಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಕ್ವಾಡ್ ಪ್ರಭಾವಿ ಗುಂಪಿನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಚರ್ಚಿಸುತ್ತದೆ.

ತಮ್ಮ ಎರಡು ದಿನಗಳ ಭೇಟಿಯ ಅವಧಿಯಲ್ಲಿ, ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಹೊಸದಾಗಿ ಆಯ್ಕೆಯಾದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಕ್ವಾಡ್ ಶೃಂಗಸಭೆಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಮಹತ್ವದ ಭದ್ರತಾ ಸಮಸ್ಯೆಗಳು ಬರುವ ಸಾಧ್ಯತೆಯಿದೆ.

ಎಲ್ಲ ಸದಸ್ಯರು ತೈವಾನ್ ಜಲಸಂಧಿಯಲ್ಲಿ ಶಾಂತಿ ಮತ್ತು ಸ್ಥಿರತೆಯ ಕುರಿತ ವಿಚಾರದ ಬಗ್ಗೆಯ ಮಾತುಕತೆ ನಡೆಸಲಿದ್ದಾರೆ. ಬಿಡೆನ್ ನೇತೃತ್ವದ ಅಮೆರಿಕದ ಆಡಳಿತವು ತೈವಾನ್‌ಗೆ ಸಂಬಂಧಿಸಿ ಪ್ರತಿಬಂಧಕ ಸಂದೇಶವನ್ನು ಕಳುಹಿಸಲು ಸಿದ್ಧತೆ ನಡೆಸಿದೆ.

“ಕ್ವಾಡ್ ಸಕಾರಾತ್ಮಕ, ರಚನಾತ್ಮಕ ಕಾರ್ಯಸೂಚಿಯನ್ನು ಹೊಂದಿದೆ. ಆದ್ದರಿಂದ ನಾವು ಅದಕ್ಕಾಗಿ ದೇಶ ಅಥವಾ ಪ್ರದೇಶವನ್ನು ಗುರಿಯಾಗಿಸಿಕೊಂಡಿಲ್ಲ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬದ್ಧವಾಗಿರಬೇಕು ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಜಪಾನ್‌ನಲ್ಲಿರುವ ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...