ಈಗಾಗಲೇ ತೈಲದರ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ದಿನಬಳಕೆಯ ಅಗತ್ಯ ತರಕಾರಿಯಾದ ಟೊಮೊಟೊ ಬೆಲೆ ರಾಜ್ಯ ರಾಜಧಾನಿಯಲ್ಲಿ 100 ರೂಪಾಯಿ ಗಡಿ ಮುಟ್ಟಿದ್ದು, ಇನ್ನುಳಿದ ನಗರಗಳಲ್ಲೂ ಸಹ 100 ರೂ. ಆಸುಪಾಸಿನಲ್ಲಿದೆ.
ಚಂಡಮಾರುತದ ಕಾರಣಕ್ಕೆ ಭಾರಿ ಮಳೆಯಾಗಿರುವ ಕಾರಣ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ರೈತರು ಬೆಳೆದ ಟೊಮೊಟೊ ಬೆಳೆ ಹಾಳಾಗಿದ್ದು, ಜೊತೆಗೆ ಆಲಿಕಲ್ಲು ಮಳೆಯ ಕಾರಣದಿಂದಲೂ ಬೆಳೆ ನಷ್ಟವಾಗಿದೆ. ಇದೆಲ್ಲದರ ಪರಿಣಾಮ ಮಾರುಕಟ್ಟೆಗೆ ಟೊಮೆಟೊ ಅತಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಇದರಿಂದಾಗಿ ಬೆಲೆ ಮುಗಿಲು ಮುಟ್ಟುವಂತಾಗಿದೆ.
ಬೆಲೆ ಏರಿಕೆಯ ಪರಿಣಾಮ ಶ್ರೀಸಾಮಾನ್ಯನ ಮೇಲೆ ಆಗುತ್ತಿದ್ದು, ಸಿಗುವ ಅಲ್ಪ ಸಂಬಳದಲ್ಲೇ ಜೀವನ ಸಾಗಿಸುತ್ತಿರುವವರು ಪರದಾಡುವಂತಾಗಿದೆ. ಈಗಾಗಲೇ ಗ್ಯಾಸ್ ಬೆಲೆ ಮುಗಿಲು ಮುಟ್ಟಿದ್ದು, ಇದರ ಜೊತೆಗೆ ಅಗತ್ಯ ಸಾಮಗ್ರಿಗಳ ದರ ಸಹ ಏರಿಕೆಯತ್ತ ಮುಖ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗಬಹುದೆಂಬ ಆತಂಕವೂ ಜನರನ್ನು ಕಾಡುತ್ತಿದೆ.