alex Certify ಜಂಕ್‌ ಫುಡ್‌ ತಿನ್ನುವ ಅಭ್ಯಾಸವಿದ್ರೆ ಕೂಡಲೇ ಬಿಟ್ಟುಬಿಡಿ, ಇದರಿಂದ ದೇಶಕ್ಕೇ ಕಾದಿದೆ ಅಪಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಂಕ್‌ ಫುಡ್‌ ತಿನ್ನುವ ಅಭ್ಯಾಸವಿದ್ರೆ ಕೂಡಲೇ ಬಿಟ್ಟುಬಿಡಿ, ಇದರಿಂದ ದೇಶಕ್ಕೇ ಕಾದಿದೆ ಅಪಾಯ…!

ದೇಶದ ಪ್ರಗತಿ ಆರೋಗ್ಯಕರ ಯುವ ಪೀಳಿಗೆಯನ್ನು ಅವಲಂಬಿಸಿದೆ. ಯುವ ಪೀಳಿಗೆ ಸದೃಢವಾಗಿದ್ದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.62ರಷ್ಟು ಮಂದಿ 15 ರಿಂದ 59 ವರ್ಷ ವಯಸ್ಸಿನವರಿದ್ದಾರೆ. ಭವಿಷ್ಯದಲ್ಲಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಭರವಸೆ ಈ ಯುವ ಪೀಳಿಗೆಯ ಮೇಲಿದೆ.

ಆದರೆ ಯುವ ಜನತೆ ಜಂಕ್ ಫುಡ್‌ಗೆ ದಾಸರಾಗುತ್ತಿರುವುದರಿಂದ  ಬೊಜ್ಜು, ಹೃದ್ರೋಗ, ಮಧುಮೇಹ, ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಬ್ರೆಜಿಲ್‌ನ ವಿಶ್ವವಿದ್ಯಾಲಯ 5 ವರ್ಷಗಳ ಕಾಲ 12 ರಿಂದ 19 ವರ್ಷ ವಯಸ್ಸಿನ ಒಂದೂವರೆ ಸಾವಿರಕ್ಕೂ ಹೆಚ್ಚು ಜನರನ್ನು ಸಂಶೋಧನೆಗೆ ಒಳಪಡಿಸಿದೆ.  ಜಂಕ್ ಫುಡ್ ಜಾಸ್ತಿ ತಿನ್ನುವವರಲ್ಲಿ ಹೊಟ್ಟೆಯ ಬೊಜ್ಜು ಹೆಚ್ಚಾಗಿರುವುದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಕೈಕಾಲುಗಳು, ಯಕೃತ್ತು ಮತ್ತು ಕರುಳಿನ ಬಳಿ ಕೊಬ್ಬಿನ ಶೇಖರಣೆಯಿಂದಾಗಿ, ಅಧಿಕ ರಕ್ತದೊತ್ತಡ, ಹೃದ್ರೋಗ, ಟೈಪ್ 2 ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳು ಬರುತ್ತವೆ. 12 ರಿಂದ 19 ವರ್ಷ ವಯಸ್ಸಿನವರು ತಮ್ಮ ಒಟ್ಟು ಆಹಾರದಲ್ಲಿ ಶೇ.64ರಷ್ಟು ರಷ್ಟು ಜಂಕ್‌ ಫುಡ್‌ ಸೇವಿಸುತ್ತಿರುವುದು ದೃಢಪಟ್ಟಿದೆ. ಹೊಟ್ಟೆಯ ಬೊಜ್ಜು ಮಾತ್ರವಲ್ಲ, ಶೇ.63ರಷ್ಟು ಯುವಜನತೆಯ ಯಕೃತ್ತು ಮತ್ತು ಕರುಳಿನ ಬಳಿ ಕೊಬ್ಬು ಸಂಗ್ರಹವಾಗಿದೆ.

ಇದರಿಂದಾಗಿ ಈ ಯುವಕರು ಚಿಕ್ಕ ವಯಸ್ಸಿನಲ್ಲೇ ಅಧಿಕ ರಕ್ತದೊತ್ತಡ, ಹೃದ್ರೋಗ, ಟೈಪ್ 2 ಮಧುಮೇಹ, ಅಧಿಕ ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಯುವಜನರಲ್ಲಿ ಸ್ಥೂಲಕಾಯತೆ 21 ನೇ ಶತಮಾನದ ದೊಡ್ಡ ಸಮಸ್ಯೆಯಾಗುತ್ತಿದೆ. ಭಾರತದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿದೆ. ‘ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೌತ್’ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 2020 ರಲ್ಲಿ ಬೊಜ್ಜು ಹೊಂದಿರುವ 5 ರಿಂದ 19 ವರ್ಷ ವಯಸ್ಸಿನವರ ಸಂಖ್ಯೆ 17 ಮಿಲಿಯನ್‌ಗಿಂತಲೂ ಹೆಚ್ಚು.

ಇದು 2030ರ ವೇಳೆಗೆ 20 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತದೆ. ಮಕ್ಕಳಲ್ಲಿ ಸ್ಥೂಲಕಾಯತೆಗೆ ಜಂಕ್ ಫುಡ್ ಮುಖ್ಯ ಕಾರಣ. ಸಮೀಕ್ಷೆಯ ಪ್ರಕಾರ ಶೇ.93ರಷ್ಟು ಮಕ್ಕಳು ವಾರದಲ್ಲಿ ಕನಿಷ್ಠ ಎರಡು ಬಾರಿಯಾದ್ರೂ ಪ್ಯಾಕ್ ಮಾಡಿದ ಜಂಕ್ ಫುಡ್  ತಿನ್ನುತ್ತಾರೆ. 13 ರಿಂದ 17 ವರ್ಷ ವಯಸ್ಸಿನ ಶೇ.59ರಷ್ಟು ಮಕ್ಕಳು ಪ್ರತಿದಿನ ಜಂಕ್ ಫುಡ್ ತಿನ್ನುತ್ತಾರೆ.

ಭಾರತವು ವಿಶ್ವದ ಅತಿದೊಡ್ಡ ಯುವ ಶಕ್ತಿಯಾಗಿದೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು 28 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಚೀನಾ ಮತ್ತು ಅಮೆರಿಕದಂತಹ ದೇಶಗಳಲ್ಲಿ, ಜನರ ಮಧ್ಯವಯಸ್ಸು 37 ವರ್ಷಗಳು,  ಆಸ್ಟ್ರೇಲಿಯಾದಲ್ಲಿ 39 ವರ್ಷ, ರಷ್ಯಾದಲ್ಲಿ 40 ವರ್ಷ, ಕೆನಡಾದಲ್ಲಿ 42 ವರ್ಷ ಮತ್ತು ಜಪಾನ್‌ನಲ್ಲಿ 49 ವರ್ಷಗಳು. ಹಾಗಾಗಿ  ಯುವಜನತೆ ಜಂಕ್ ಫುಡ್ ಬದಲಿಗೆ ಮನೆಯಲ್ಲಿ ಪೌಷ್ಟಿಕ ಆಹಾರ ಸೇವಿಸುವುದು ಉತ್ತಮ. ದೇಶವನ್ನು ಕಾಪಾಡುವುದು ಭಾರತದ ಯುವ ಪೀಳಿಗೆಯ ಜವಾಬ್ದಾರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...