ತಮ್ಮ ಸೋದರಳಿಯನ ಮನೆ ಮೇಲೆ ಇಡಿ ನಡೆಸಿದ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಆರೋಪಿಸಿದ್ದಾರೆ. ಅಲ್ಲದೆ ರಾಜ್ಯದ ಜನತೆ ಕಾಂಗ್ರೆಸ್ ಜೊತೆಗಿದ್ದಾರೆ ಎಂದು ಇದೇ ವೇಳೆ ಹೇಳಿದರು.
ನಮ್ಮ ಸೋದರಳಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯ ಹಿಂದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಪಂಜಾಬ್ ಸಿಎಂ ಚರಣ್ಜೀತ್ ಸಿಂಗ್ ಚನ್ನಿ ಆರೋಪ ಮಾಡಿದ್ದಾರೆ.
ಪಶ್ಚಿಮ ಬಂಗಾಳವೇ ಆಗಿರಲಿ ಅಥವಾ ತಮಿಳುನಾಡೇ ಆಗಿರಲಿ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಈ ರೀತಿ ಜಾರಿ ನಿರ್ದೇಶನಾಲಯದ ಕಡೆಯಿಂದ ದಾಳಿಯನ್ನು ನಡೆಸುವುದು ಬಿಜೆಪಿಯ ಕೆಲಸವಾಗಿದೆ. ಆದರೆ ಇದಕ್ಕೆ ನಾವು ಹೆದರುವುದಿಲ್ಲ. ಪಂಜಾಬ್ನ ಜನತೆ ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ನ ಸಿಎಂ ಅಭ್ಯರ್ಥಿ ಯಾರು ಎಂದು ಕೇಳಲಾದ ಪ್ರಶ್ನೆಗೂ ಇದೇ ವೇಳೆ ಉತ್ತರಿಸಿದ ಅವರು, ನಾನು ಪಂಜಾಬ್ನ ಮುಖ್ಯಮಂತ್ರಿ. ಮುಂದಿನ ಚುನಾವಣೆಯಲ್ಲಿ ಯಾರನ್ನು ಸಿಎಂ ಅಭ್ಯರ್ಥಿ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.