
ಆಲೂ ಮಟರ್ ಹೆಸರು ಕೇಳುತ್ತಲೆ ಬಾಯಲ್ಲಿ ನೀರು ಬರುತ್ತದೆ. ಚಪಾತಿ, ರೋಟಿಯೊಡನೆ ನೆಂಚಿಕೊಂಡು ತಿನ್ನಲು ಇದು ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿಗಳು:
ಆಲೂಗಡ್ಡೆ – 3, ½ ಕಪ್ – ಹಸಿ ಬಟಾಣಿ, 2 – ಟೊಮೆಟೊ, 2 – ಈರುಳ್ಳಿ, 2 ಟೇಬಲ್ ಸ್ಪೂನ್ – ಎಣ್ಣೆ, 1 – ಹಸಿಮೆಣಸು, ½ ಟೀ ಸ್ಪೂನ್ – ಜೀರಿಗೆ, 1 ಟೇಬಲ್ ಸ್ಪೂನ್ – ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್ – ಧನಿಯಾ ಪುಡಿ, ¾ ಟೀ ಸ್ಪೂನ್ – ಖಾರದ ಪುಡಿ, ½ ಟೀ ಸ್ಪೂನ್ – ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು, ¼ ಟೀ ಸ್ಪೂನ್ – ಅರಶಿನ, ½ ಟೀ ಸ್ಪೂನ್ – ಕಸೂರಿ ಮೇಥಿ, ಸ್ವಲ್ಪ – ಕೊತ್ತಂಬರಿ ಸೊಪ್ಪು.
ಟೊಮೆಟೊವನ್ನು ಕತ್ತರಿಸಿಕೊಂಡು ಮಿಕ್ಸಿಯಲ್ಲಿ ಪ್ಯೂರಿ ಮಾಡಿಕೊಳ್ಳಿ. ಈರುಳ್ಳಿ, ಹಾಗೂ ಆಲೂಗಡ್ಡೆಯನ್ನು ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಜೀರಿಗೆ ಸೇರಿಸಿ. ನಂತರ ಇದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.
ನಂತರ ಟೊಮೆಟೊ ಪ್ಯೂರಿ ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಂಡು ಉಪ್ಪು, ಖಾರದ ಪುಡಿ, ಅರಶಿನ, ಗರಂ ಮಸಾಲ, ಧನಿಯಾ ಪುಡಿ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣ ಚೆನ್ನಾಗಿ ಬೇಯಬೇಕು. ನಂತರ ಇದಕ್ಕೆ ಆಲೂಗಡ್ಡೆ, ಬಟಾಣಿ ಹಾಕಿ 1 ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ. ಆಲೂಗಡ್ಡೆ ಬೆಂದ ಬಳಿಕ ಕಸೂರಿ ಮೇಥಿ ಹಾಕಿ ಸ್ವಲ್ಪ ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ.