ಚಪಾತಿ, ದೋಸೆ ಮಾಡಿದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಇಲ್ಲಿ ಸುಲಭವಾಗಿ ಮಾಡುವ ಹಸಿ ಬಟಾಣಿ ಗೊಜ್ಜು ಇದೆ ಟ್ರೈ ಮಾಡಿ ನಿಮ್ಮ ಮನೆಯಲ್ಲಿ.
ಬೇಕಾಗುವ ಸಾಮಾಗ್ರಿಗಳು:
ಹಸಿ ಬಟಾಣಿ – 1 ಕಪ್, ಜೀರಿಗೆ – 1/2 ಟೀ ಸ್ಪೂನ್, ಸಾಸಿವೆ – 1/2 ಟೀ ಸ್ಪೂನ್, ಧನಿಯಾ ಪುಡಿ – 1 ಟೇಬಲ್ ಸ್ಪೂನ್, ಖಾರದಪುಡಿ – 1/2 ಟೀ ಸ್ಪೂನ್, ಅರಿಶಿನಪುಡಿ – 1/4 ಟೀ ಸ್ಪೂನ್, ಎಣ್ಣೆ – ಸ್ವಲ್ಪ, ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್, ಹಸಿಮೆಣಸು – 2, ಶುಂಠಿ – 1 ಇಂಚು, ಟೊಮೆಟೊ – 2, ಇಂಗು – ಚಿಟಿಕೆ.
ಮಾಡುವ ವಿಧಾನ:
ಒಂದು ಮಿಕ್ಸಿ ಜಾರಿಗೆ ಶುಂಠಿ ಹಸಿಮೆಣಸು ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಟೊಮೆಟೊ ಹಾಕಿ ಮತ್ತೊಮ್ಮೆ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಇಂಗು ಹಾಕಿ. ನಂತರ ಧನಿಯಾ ಪುಡಿ ಮಿಕ್ಸ್ ಮಾಡಿ ಸ್ವಲ್ಪ ಫ್ರೈ ಮಾಡಿಕೊಂಡು ಅದಕ್ಕೆ ರುಬ್ಬಿದ ಟೊಮೆಟೊ ಮಿಶ್ರಣ ಸೇರಿಸಿ.
ಟೊಮೆಟೊ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಳ್ಳಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, ಅರಿಶಿನ ಹಾಕಿ 1 ನಿಮಿಷಗಳ ಕಾಲ ಫ್ರೈ ಮಾಡಿ ಹಸಿ ಬಟಾಣಿಕಾಳು ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ. ಇದಕ್ಕೆ 1 ಕಪ್ ನೀರು ಸೇರಿಸಿ ಬಟಾಣಿ ಬೇಯುವವರೆಗೆ ಬೇಯಿಸಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ. ಬಿಸಿ ಅನ್ನ, ಚಪಾತಿ ಜತೆಗೆ ತುಂಬಾ ಚೆನ್ನಾಗಿರುತ್ತದೆ.