ಲಂಡನ್: ಹೋಟೆಲ್ಗೆ ಹೋದ ಸಂದರ್ಭದಲ್ಲಿ ನೀವು ಎಷ್ಟು ಸಭ್ಯರಾಗಿ ವರ್ತಿಸುತ್ತೀರೋ ಅಷ್ಟು ಕಡಿಮೆ ಮೊತ್ತದಲ್ಲಿ ಆಹಾರ ಸೇವನೆ ಮಾಡಬಹುದು !
ಇಂಥದ್ದೊಂದು ಕುತೂಹಲದ ನಿಯಮ ಜಾರಿಗೆ ತಂದಿರುವುದು ಇಂಗ್ಲೆಂಡ್ನ ಪ್ರೆಸ್ಟನ್‌ನಲ್ಲಿರುವ ಚಾಯ್ ಸ್ಟಾಪ್ ಎಂಬ ಹೋಟೆಲ್. ಇಲ್ಲಿಗೆ ಬರುವ ಗ್ರಾಹಕರು, ಊಟ ಸರಬರಾಜು ಮಾಡುವ ಸಿಬ್ಬಂದಿ ಮೇಲೆ ರೇಗಾಟ, ಕೂಗಾಟ, ಅನುಚಿತ ವರ್ತನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹೋಟೆಲ್ಗೆ ಹೋದಾಗ ಸಭ್ಯರಾಗಿದ್ದರೆ ಮಾತ್ರ ಕಡಿಮೆ ಮೊತ್ತದಲ್ಲಿ ಆಹಾರ ಸೇವನೆ ಮಾಡಬಹುದು, ಎಷ್ಟು ಅಸಭ್ಯವಾಗಿ ವರ್ತಿಸುತ್ತೀರೋ ಅಷ್ಟು ದುಬಾರಿ ಬೆಲೆಯನ್ನು ತೆರಬೇಕು !
ಹೋಟೆಲ್ಗೆ ಬರುವ ಗ್ರಾಹಕರು ಸಭ್ಯರಾಗಿ ವರ್ತಿಸುವುದನ್ನು ಉತ್ತೇಜಿಸಲು ಇಂಥ ನಿಯಮ ಜಾರಿಗೆ ತರಲಾಗಿದೆ ಎಂದಿದ್ದಾರೆ ಇದರ ಮಾಲೀಕ ಉಸ್ಮಾನ್ ಹುಸೇನ್. ಚಹ, ಡೋನಟ್, ಸ್ಟ್ರೀಟ್ ಫುಡ್ ಮತ್ತು ಡೆಸರ್ಟ್ಗಳು ಇಲ್ಲಿ ಲಭ್ಯವಿದ್ದು, ಬರುವ ಗ್ರಾಹಕರ ಸಭ್ಯತೆಯ ಆಧಾರದ ಮೇಲೆ ಬೇರೆ ಬೇರೆ ರೀತಿಯ ಶುಲ್ಕ ವಿಧಿಸಲಾಗುತ್ತದೆ.
ಈ ಕುರಿತು ದೊಡ್ಡದೊಂದು ಫಲಕ ಕೂಡ ಅಳವಡಿಸಲಾಗಿದೆ. ಅದರಲ್ಲಿ ಗ್ರಾಹಕರು ಹೇಗೆ ಸಭ್ಯರಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಚಿಕ್ಕ-ಚೊಕ್ಕದಾಗಿ ಉಲ್ಲೇಖಿಸಲಾಗಿದೆ. “ದೇಸಿ ಚಾಯ್ ಕೊಡಿ” ಎಂದರೆ ಆ ಚಹಕ್ಕೆ ಗ್ರಾಹಕರಿಗೆ 5 ಡಾಲರ್ ಶುಲ್ಕವಾದರೆ, “ದಯವಿಟ್ಟು ದೇಸಿ ಚಾಯ್ ಕೊಡುವಿರಾ” ಎಂದು ಕೇಳಿದರೆ ಅದೇ ಚಹದ ಬೆಲೆ 3 ಡಾಲರ್. ಒಂದು ವೇಳೆ “ಹಲೋ ದೇಸಿ ಚಾಯ್ ಕೊಡಿ” ಎಂದು ಆರ್ಡರ್ ಮಾಡಿದರೆ ಅದೇ ಚಹಕ್ಕೆ 1.90 ಡಾಲರ್ ದರ ವಿಧಿಸಲಾಗುವುದು ಎಂದು ಗ್ರಾಹಕರಿಗೆ ಸೂಚ್ಯವಾಗಿ ತಿಳಿಸಲಾಗಿದೆ.